ನಂಜನಗೂಡು ರೋಟರಿ ಕ್ಲಬ್‌ಗೆ ಆಯ್ಕೆ

ನಂಜನಗೂಡು ರೋಟರಿ ಕ್ಲಬ್‌ಗೆ ಆಯ್ಕೆ
Published on

ನಂಜನಗೂಡು: ನಂಜನಗೂಡು ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಪಿ.ಎಚ್.ರೂಪೇಶ್‌ಕುಮಾರ್, ಕಾರ್ಯದರ್ಶಿಯಾಗಿ ಡಾ.ಧರ್ಮರಾಜ್ ಅಧಿಕಾರ ಸ್ವೀಕರಿಸಿದರು.

ನಗರದ ಯಾತ್ರೀಭವನ ಕಲ್ಯಾಣ ಮಂಟಪದಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ನಿಯೋಜಿತ ಗೌರ್ನರ್ ಪಿ.ಕೆ.ರಾಮಕೃಷ್ಣ ನಿರ್ಗಮಿತ ಅಧ್ಯಕ್ಷ ರಮೇಶ್ ಅವರಿಂದ ನೂತನ ಅಧ್ಯಕ್ಷ ರೂಪೇಶ್‌ಕುಮಾರ್ ಅವರಿಗೆ ಪದವಿ ಹಸ್ತಾಂತರಿಸಲಾಯಿತು.

ನೂತನ ಅಧ್ಯಕ್ಷ ರೂಪೇಶ್‌ಕುಮಾರ್ ಮಾತನಾಡಿ, ರೋಟರಿ ಸೇವಾ ಸಂಸ್ಥೆಯು ಹಲವು ಕ್ಷೇತ್ರಗಳಲ್ಲಿ ತನ್ನ ಸೇವಾ ಕಾರ್ಯ ಮಾಡುತ್ತಾ ಹೆಸರುವಾಸಿಯಾಗಿದೆ. ಈ ಸಂಸ್ಥೆಯಿಂದ ಸ್ಫೂರ್ತಿಗೊಂಡು ನಾನು ಮುಂದಿನ ದಿನಗಳಲ್ಲಿ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಸಂಧ್ಯಾ ಸುರಕ್ಷ ಕಾರ್ಯಕ್ರಮ ರೂಪಿಸುತ್ತೇನೆ. ಬಡವರಿಗೆ ನೆರವಾಗುವಂತಹ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗುವುದು, ಸಮಾಜದ ಏಳಿಗೆ ಹಿತರದೃಷ್ಠಿಯಿಂದ ಮದ್ಯ ವ್ಯಸನಿಗಳಿಗೆ ಕುಡಿತದ ಚಟ ಬಿಡಿಸುವಂತಹ ಶಿಬಿರಗಳ ಆಯೋಜನೆ, ಕ್ಯಾನ್ಸರ್ ತಡೆಗಟ್ಟುವ ಬಗ್ಗೆ ಜಾಗೃತಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರಿನ ಘಟಕ, ಅಂಗನವಾಡಿಗಳ ಅಭಿವೃದ್ಧಿ, ನಿರುದ್ಯೋಗ ಹೋಗಲಾಡಿಸುವ ಸಲುವಾಗಿ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಆಯೋಜನೆ, ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು, ಮುಖ್ಯವಾಗಿ ಇಂದಿನ ಯುವ ಪೀಳಿಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಅದನ್ನು ದೂರಮಾಡುವ ಸಲುವಾಗಿ ಮಾನಸಿಕ ಆರೋಗ್ಯ ಕಾರ್ಯಕ್ರಮ ರೂಪಿಸುವುದು ಸೇರಿದಂತೆ ಶಿಕ್ಷಣಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸುತ್ತೇನೆ ಎಂದು ಹೇಳಿದರು.

ಗೌರ್ನರ್ ರಾಮಕೃಷ್ಣ ಮಾತನಾಡಿ, ರೋಟರಿ ಸಂಸ್ಥೆಯ ಮೂಲಕ ಬಡವರಿಗೆ, ಅಂಗವಿಕಲರಿಗೆ, ಶಿಕ್ಷಣಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಜನರಿಗೆ ಸೇವೆ ಒದಗಿಸಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ದಳವಾಯಿ ಶಾಲೆಗೆ 250 ಊಟದ ತಟ್ಟೆಗಳನ್ನು ಕೊಡುಗೆಯಾಗಿ ವಿತರಿಸಲಾಯಿತು.

ಸಮಾರಂಭದಲ್ಲಿ ಕಾರ್ಯದರ್ಶಿ ಡಾ.ಧರ್ಮರಾಜ್, ರೊಟರಿ ಕ್ಲಬ್ ಸದಸ್ಯರಾದ ರಮೇಶ್, ಸಿ.ಪ್ರಕಾಶ್‌ಚಂದ್ ಜೈನ್, ಶ್ರೀಕಂಠಪ್ರಸಾದ್, ಡಾ.ಶ್ರೀಕಾಂತ್, ಕೆ.ಜಿ.ಮಹೇಶ್, ಕೆ.ಜಿ.ರಾಮಚಂದ್ರ, ಮುರಳಿಧರನ್, ಕೆ.ಎ.ಪುಟ್ಟರಾಜು, ಎಂ.ರಾಜಶೇಖರಮೂರ್ತಿ, ಕೃಷ್ಣಮೂರ್ತಿ, ಶಿವಾನಂದ, ವಿಜಯಶಂಕರ್, ಧೀರಜ್‌ಕುಮಾರ್, ಕನಕರಾಜು, ಪಿ.ಶ್ರೀನಿವಾಸರೆಡ್ಡಿ, ಸುರೇಂದ್ರ, ಎನ್.ಚಂದ್ರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net