ವಿಶ್ವಕಪ್ ಗೆಲುವಿನ​ ಕ್ರೆಡಿಟ್​ ಜತೆಗೆ ವೀರೂ​, ಯುವಿ ಕೆರಿಯರ್​ ನಾಶ ಮಾಡಿದ್ರಾ ಧೋನಿ? ಇಲ್ಲಿದೆ ನೋಡಿ ಸತ್ಯ ಸಂಗತಿ…

MS Dhoni
Published on

ಮಹೇಂದ್ರ ಸಿಂಗ್ ಧೋನಿ... ಭಾರತೀಯ ಕ್ರಿಕೆಟ್​ ಇತಿಹಾಸದಲ್ಲೇ ಸದಾ ನೆನಪಿನಲ್ಲಿ ಉಳಿಯುವ ಹೆಸರು. ಈ ಹೆಸರಲ್ಲೇ ಏನೋ ಒಂದು ಮ್ಯಾಜಿಕ್ ಇದೆ. ಟೀಮ್​ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕನೆಂದರೆ ಅದು ಧೋನಿ. ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್​ ನಂತರ, ರನ್​ ಮೆಷಿನ್​ ವಿರಾಟ್​ ಕೊಹ್ಲಿಗಿಂತ ಮೊದಲು ಅಪಾರ ಅಭಿಮಾನಿ ಬಳಗ ಮತ್ತು ಕ್ರೇಜ್ ಕಂಡ ಕ್ರಿಕೆಟಿಗನೆಂದರೆ ಅದು ಧೋನಿ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ರೈಲ್ವೇ ಇಲಾಖೆಯಲ್ಲಿ ಟಿಟಿ ಆಗಿ ಕೆಲಸ ಮಾಡಬೇಕಿದ್ದ ಹುಡುಗ ತನ್ನ ಮಾರ್ಗವನ್ನು ಬದಲಿಸಿ ಟೀಮ್​ ಇಂಡಿಯಾದಲ್ಲಿ ಸ್ಥಾನ ಪಡೆದು, ಭಾರತೀಯ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ದ ಮಹಾನ್​ ಕ್ರಿಕೆಟಿಗ.

ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲಿ ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನ ಇತಿಹಾಸದಲ್ಲೇ ಯಾವುದೇ ನಾಯಕನಿಗೆ ಸಾಧ್ಯವಾಗದ ರೀತಿಯಲ್ಲಿ ಮೂರು ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದ ಹೆಗ್ಗಳಿಕೆಯನ್ನು ಧೋನಿ ಹೊಂದಿದ್ದಾರೆ. ಧೋನಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ. ಧೋನಿಯ ಯಶಸ್ಸು, ಆಟದ ವೈಖರಿ ಹಾಗೂ ನಾಯಕತ್ವವನ್ನು ಹೊಗಳುವವರು ತುಂಬಾ ಮಂದಿ ಇದಾರೆ. ಅದೇ ರೀತಿ ಅವರನ್ನು ಸ್ವಾರ್ಥಿ ಕರೆಯುವವರು ಕೂಡ ಇದಾರೆ. ಟೀಮ್​ ಇಂಡಿಯಾದ ಕೆಲ ಕ್ರಿಕೆಟಿಗರ ಕೆರಿಯರ್ ಹಾಳು ಮಾಡಿದರು ಮತ್ತು ವಿಶ್ವಕಪ್ ಗೆಲುವಿನ ಕ್ರೆಡಿಟ್​ ಅನ್ನು ತಾವೇ ತೆಗೆದುಕೊಂಡರು ಎಂಬ ಅಪವಾದ ಧೋನಿಯ ಮೇಲಿದೆ. ಹಾಗಾದರೆ, ಧೋನಿ ನಿಜವಾಗಿಯೂ ಕೆಲವು ಕ್ರಿಕೆಟಿಗರ ವೃತ್ತಿಜೀವನವನ್ನು ಹಾನಿಗೊಳಿಸಿದರಾ? ಮತ್ತು ವಿಶ್ವಕಪ್​ ಗೆಲುವಿನ ಕ್ರೆಡಿಟ್ ತೆಗೆದುಕೊಂಡರಾ? ಈ ಅಪವಾದಗಳಲ್ಲಿ ಏನಾದರೂ ಸತ್ಯವಿದೆಯೇ? ಎಂಬ ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡುಕೊಳ್ಳೋಣ.

ಅಂದಹಾಗೆ ಇಡೀ ತಂಡ ಒಟ್ಟಾಗಿ 2011ರ ಏಕದಿನ ವಿಶ್ವಕಪ್ ಗೆದ್ದರೆ ಆ ಶ್ರೇಯ ಧೋನಿಗೇ ಸಲ್ಲುತ್ತದೆ ಎಂಬ ಪ್ರಚಾರ ಈಗಷ್ಟೇ ಅಲ್ಲ, ಹಿಂದಿನಿಂದಲೂ ಕೇಳಿಬರುತ್ತಿದೆ. ಆದರೆ, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಅನೇಕ ಸಂದರ್ಭಗಳಲ್ಲಿ ಇದನ್ನು ಸಾರ್ವಜನಿಕವಾಗಿಯೇ ನಿರಾಕರಿಸಿದ್ದಾರೆ. ವಿಶ್ವಕಪ್ ಗೆಲ್ಲುವುದೆಂದರೆ ಅದೊಂದು ಸಾಂಘಿಕ ಪ್ರಯತ್ನವಾಗಿದೆ ಹೊರತು ಧೋನಿ ಒಬ್ಬರೇ ತಂದರು ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.

ಇನ್ನು ವಿಶ್ವಕಪ್ ವಿಜೇತ ತಂಡದಲ್ಲಿದ್ದ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಜಹೀರ್ ಖಾನ್ ಅಂತಾರಾಷ್ಟ್ರೀಯ ವೃತ್ತಿಜೀವನ ಶೀಘ್ರ ಅಂತ್ಯಗೊಳ್ಳುವುದರ ಹಿಂದೆ ಧೋನಿ ಕೈವಾಡವಿದೆ ಎಂಬ ಆರೋಪವೂ ಇದೆ. ಈ ವಿಚಾರದಲ್ಲಿ ಕೆಲವು ಕ್ರಿಕೆಟ್ ತಜ್ಞರು ಕೂಡ ಧೋನಿ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಟೀಕೆ, ಆರೋಪಗಳನ್ನು ಮೀರಿ ನೋಡಿದರೆ ಇದರಲ್ಲಿ ಧೋನಿಯ ತಪ್ಪೆಷ್ಟು? ಅವನು ಎಷ್ಟು ಶ್ರೇಷ್ಠ ಎಂದು ಅರ್ಥಮಾಡಿಕೊಳ್ಳಬಹುದು.

2004ರ ಡಿಸೆಂಬರ್​ನಲ್ಲಿ ಧೋನಿ ಟೀಮ್​ ಇಂಡಿಯಾ ಪ್ರವೇಶಿಸಿದರು. ಮೊದಲ ಎರಡ್ಮೂರು ಪಂದ್ಯಗಳಲ್ಲಿ ಧೋನಿ ವಿಫಲರಾದರು. ಆದರೆ, ಧೋನಿ ಪ್ರತಿಭೆಯ ಮೇಲೆ ನಂಬಿಕೆ ಇಟ್ಟಿದ್ದ ಅಂದಿನ ನಾಯಕ ಸೌರವ್ ಗಂಗೂಲಿ, ಧೋನಿಗೆ ಇನ್ನಷ್ಟು ಅವಕಾಶಗಳನ್ನು ನೀಡಿದರು. ನಂತರ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಧೋನಿ, ಗಂಗೂಲಿ ತನ್ನ ಮೇಲೇ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ಟೀಮ್ ಇಂಡಿಯಾದಲ್ಲಿ ಸಾಮಾನ್ಯ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. 2007ರ ಏಕದಿನ ವಿಶ್ವಕಪ್‌ಗೂ ಆಯ್ಕೆಯಾದರು. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಈ ವಿಶ್ವಕಪ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕೆಟ್ಟ ವಿಶ್ವಕಪ್ ಎಂದು ಹೇಳಬಹುದು. ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ, ರಾಹುಲ್ ದ್ರಾವಿಡ್ ನಾಯಕತ್ವದ ಟೀಮ್ ಇಂಡಿಯಾ ಗ್ರೂಪ್​ ಹಂತದಲ್ಲಿ ಮನೆಗೆ ಬಂದಿತು. ಇದು ಭಾರತಕ್ಕೆ ಭಾರಿ ಅವಮಾನವಾಯಿತು. ಟೀಮ್​ ಇಂಡಿಯಾದಲ್ಲಿ ಸ್ವಲ್ಪವೂ ಆತ್ಮಸ್ಥೈರ್ಯ ಇಲ್ಲದಿದ್ದ ಸಮಯದಲ್ಲಿ ಧೋನಿ ಎಂಬ ಹುಡುಗ ಟೀಮ್​ ಇಂಡಿಯಾದ ಟಿ20 ನಾಯಕತ್ವದ ಸಾರಥ್ಯ ವಹಿಸಿಕೊಂಡರು. ಅದೇ ವರ್ಷದಲ್ಲಿ, ಐಸಿಸಿ ಮೊದಲ ಟಿ20 ವಿಶ್ವಕಪ್ 2007 ಅನ್ನು ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿತು. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರಂತಹ ಹಿರಿಯ ಕ್ರಿಕೆಟಿಗರು ಟಿ20ಯಿಂದ ದೂರವಿದ್ದು, ಟೆಸ್ಟ್ ಮತ್ತು ಏಕದಿನ ಮಾದರಿಗಳಿಗೆ ಮಾತ್ರ ಸೀಮಿತವಾಗಿದ್ದರು.

ಸಂಪೂರ್ಣವಾಗಿ ಯುವ ತಂಡದೊಂದಿಗೆ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ ಆಡಲು ಆಫ್ರಿಕಾಗೆ ಹೋಯಿತು ಮತ್ತು ಚಾಂಪಿಯನ್ ಕೂಡ ಆಯಿತು. ಆ ಟೂರ್ನಿಯಲ್ಲಿ ಎಲ್ಲರೂ ಚೆನ್ನಾಗಿ ಆಡಿದರು. ಪಾಕಿಸ್ತಾನ ವಿರುದ್ಧದ ಅಂತಿಮ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಗೌತಮ್ ಗಂಭೀರ್ ಮತ್ತು ಬೌಲಿಂಗ್‌ನಲ್ಲಿ ಇರ್ಫಾನ್ ಪಠಾಣ್ ಅದ್ಭುತ ಪ್ರದರ್ಶನ ನೀಡಿದರು. ಆ ಪಂದ್ಯದ ನಂತರ ಅವರಿಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂತು. ಹೆಚ್ಚು ಅನುಭವವಿಲ್ಲದ ಧೋನಿ ಅವರು ವಿರೇಂದ್ರ ಸೆಹ್ವಾಗ್, ಯುವರಾಜ್​ ಸಿಂಗ್​ ಮತ್ತು ಜೋಗಿಂದರ್ ಶರ್ಮ ಅವರಂತಹ ಹಿರಿಯ ಆಟಗಾರರೊಂದಿಗೆ ತಂಡವನ್ನು ಸಮರ್ಥವಾಗಿ ಮುನ್ನಡೆಸಿದರು. ಅಂತಿಮ ಪಂದ್ಯದಲ್ಲಿ ಜೋಗಿಂದರ್ ಶರ್ಮ ಅವರಿಗೆ ಕೊನೆಯ ಓವರ್ ಬೌಲ್ ಮಾಡಲು ಅವಕಾಶ ನೀಡಿದ್ದು ಧೋನಿ ಅವರ ನಿರ್ಧಾರವಾಗಿತ್ತು. ಅದು ಯಶಸ್ವಿಯೂ ಆಯಿತು. ಆ ಶ್ರೇಯ ಧೋನಿಗೆ ಸಿಕ್ಕಿತ್ತು. ಸ್ವಲ್ಪ ಯೋಚಿಸಿ, ಒಂದು ವೇಳೆ ಜೋಗಿಂದರ್ ಶರ್ಮ ವಿಫಲವಾಗಿ, ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರೆ ಧೋನಿ ಅವರು ಭಾರೀ ಟೀಕೆಗೆ ಒಳಗಾಗುತ್ತಿದ್ದರು. ನಾಯಕನ ನಿರ್ಧಾರದಿಂದ ಸೋಲು ಬಂದರೆ ಟೀಕೆ ಬರುವುದು ಸಹಜ. ಅದೇ ರೀತಿ ಗೆದ್ದರೆ ಹೊಗಳಿಕೆ ಬರುವುದರಲ್ಲಿ ತಪ್ಪೇನು? ಆದರೆ, ನನ್ನಿಂದಲೇ ತಂಡ ಗೆಲುವು ಸಾಧಿಸಿತು ಎಂದು ಧೋನಿ ಹೇಳಿರುವ ದಾಖಲೆ ಎಲ್ಲೂ ಇಲ್ಲ.

2011ರಲ್ಲಿ ನಮ್ಮ ದೇಶದಲ್ಲಿ ನಡೆದ ಏಕದಿನ ವಿಶ್ವಕಪ್ ಅನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತು. ಧೋನಿ ನಾಯಕತ್ವದಲ್ಲಿ ತಂಡ ವಿಶ್ವ ಚಾಂಪಿಯನ್ ಆಯಿತು. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಜಹೀರ್ ಖಾನ್, ಹರ್ಭಜನ್ ಸಿಂಗ್ ಎಲ್ಲರೂ ಅದ್ಭುತವಾಗಿ ಆಡಿದರು. ಸಾಂಘಿಕ ಪ್ರಯತ್ನದಿಂದ ವಿಶ್ವಕಪ್ ಗೆದ್ದಿದ್ದೇವೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಯುವಿ ಕ್ಯಾನ್ಸರ್ ವಿರುದ್ಧದ ಹೋರಾಟದ ನಡುವೆಯೂ ಪಂದ್ಯಾವಳಿಯನ್ನು ಆಡಿದರು ಮತ್ತು ಅಂತಿಮ ಪಂದ್ಯದಲ್ಲಿ ಗಂಭೀರ್ 97 ರನ್‌ಗಳ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ 97 ರನ್ ಗಳಿಸಿದ ಗಂಭೀರ್ ಬದಲಿಗೆ 91 ರನ್ ಗಳಿಸಿದ ಧೋನಿಗೆ ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಏಕೆ ನೀಡಲಾಯಿತು ಎಂದು ಹಲವರು ಪ್ರಶ್ನಿಸಿದರು. ಆದರೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯಾರಿಗೆ ನೀಡಬೇಕು ಎಂಬುದು ಧೋನಿ ಕೈಯಲ್ಲಿಲ್ಲ ಅಲ್ಲವೇ? ಅಲ್ಲದೇ ಯುವಿ ಸ್ಥಾನದಲ್ಲಿ ಬ್ಯಾಟ್ ಮಾಡಲು ಧೋನಿ ಬಂದಿದ್ದೇಕೆ ಎನ್ನುವ ಪ್ರಶ್ನೆಯೂ ಬಂತು. ಆದರೆ, ಆ ನಿರ್ಧಾರ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತೆಗೆದುಕೊಂಡಿದ್ದು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನಿರ್ಣಾಯಕ ಸಮಯದಲ್ಲಿ ಬಲ-ಎಡ ಸಂಯೋಜನೆಯನ್ನು ಮುಂದುವರಿಸಲು ಗಂಭೀರ್ ಔಟಾದರೆ ಯುವಿ ಮತ್ತು ಕೊಹ್ಲಿ ಔಟಾದರೆ ಧೋನಿ ಉತ್ತಮ ಎಂದು ಸಚಿನ್ ಸಲಹೆ ನೀಡಿದರು. 20 ವರ್ಷಗಳ ವೃತ್ತಿಜೀವನ, ನೂರಾರು ಪಂದ್ಯಗಳು, ಟನ್‌ಗಟ್ಟಲೆ ರನ್‌ಗಳು ಮತ್ತು ಈಗಾಗಲೇ ಹಲವು ವಿಶ್ವಕಪ್ ಪಂದ್ಯಗಳನ್ನು ಆಡಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ವಿಶ್ವಕಪ್ ಫೈನಲ್‌ನಲ್ಲಿ ಒಂದು ಅಮೂಲ್ಯ ಸಲಹೆಯನ್ನು ನೀಡಿದರು. ಅದರಂತೆ ಧೋನಿ ಕ್ರೀಸ್​ಗೆ ಬಂದರು. ಇಲ್ಲಿ ವೈಯಕ್ತಿಕ ಸ್ವಾರ್ಥ ಎಲ್ಲಿ ಕಾಣಿಸುತ್ತದೆ? ಕೊಹ್ಲಿ ಔಟಾದ ಬಳಿಕ ಧೋನಿ ಬ್ಯಾಟಿಂಗ್‌ಗೆ ತೆರಳಿದರು. ಧೋನಿ ಪಿಚ್‌ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೊನೆಯವರೆಗೂ ಆಡಿದ ಕಾರಣ ಅವರಿಗೆ ಮನ್ನಣೆ ಸಿಕ್ಕಿತು. ಧೋನಿ ಕೂಡ ತಕ್ಷಣ ಔಟಾಗಿದ್ದರೆ ಸಚಿನ್ ಬದಲು ಅವರನ್ನೇ ದೂಷಿಸುತ್ತಿದ್ದರು. ಚೆನ್ನಾಗಿ ಆಡಿದ ನಂತರ ಪ್ರಶಂಸೆ ಪಡೆಯುವುದರಲ್ಲಿ ತಪ್ಪೇನಿದೆ?

ಆದಾಗ್ಯೂ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ನಂತರ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಧೋನಿ ಆಡಿದ ಮಾತುಗಳನ್ನು ಕೇಳಿದರೆ ನಿಜಕ್ಕೂ ಕ್ರೆಡಿಟ್​ ತೆಗೆದುಕೊಳ್ಳುವ ಸ್ವಾರ್ಥ ಮನೋಭಾವ ಅವರಲ್ಲಿ ಇಲ್ಲ ಎಂಬುದು ಗೊತ್ತಾಗುತ್ತದೆ. ಧೋನಿ ಏನು ಮಾತನಾಡಿದ್ದರು ಅಂದರೆ, ಆರಂಭದಲ್ಲೇ ವಿಕೆಟ್ ಕಳೆದುಕೊಂಡು ನಾವು ಸಂಕಷ್ಟಕ್ಕೆ ಸಿಲುಕಿದ್ದೆವು. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅತ್ಯುತ್ತಮ ಜೊತೆಯಾಟದಿಂದ ಪಂದ್ಯವನ್ನು ಉಳಿಸಿದರು. ಬಳಿಕ ಪಂದ್ಯದ ಮೇಲೆ ನಾವು ಹಿಡಿತ ಸಾಧಿಸಿದೆವು ಎಂದು ಧೋನಿ ಹೇಳಿದ್ದರು. ಇಲ್ಲಿ ಗಂಭೀರ್ ಮತ್ತು ಕೊಹ್ಲಿಗೆ ಧೋನಿ ಮನ್ನಣೆ ನೀಡಿದರು. ಆದರೆ, ತಾವು ಚೆನ್ನಾಗಿ ಆಡಿದರ ಬಗ್ಗೆ ಹೇಳಿಕೊಳ್ಳಲಿಲ್ಲ. ಇದಾದ ನಂತರ 2013ರಲ್ಲಿ ಧೋನಿ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆದ್ದಿತು. ಈ ಮೂಲಕ ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ನೀಡಿದ ನಾಯಕನಾಗಿ ಧೋನಿ ಇತಿಹಾಸ ನಿರ್ಮಿಸಿದ್ದಾರೆ. ಆದರೆ, ಎಲ್ಲಿಯೂ ನನ್ನಿಂದ ಎಂದು ಹೇಳಿಕೊಳ್ಳಲಿಲ್ಲ, ಬದಲಾಗಿ ತಂಡದ ಪ್ರಯತ್ನವೆಂದು ಹೇಳಿದರು.

ವಿಶ್ವಕಪ್ ಟೂರ್ನಿಯ ನಂತರ ಯುವರಾಜ್ ಸಿಂಗ್ ಕ್ಯಾನ್ಸರ್​ನಿಂದಾಗಿ ತಂಡದಿಂದ ದೂರವಾದರು. ಅದಾದ ನಂತರ ಕ್ಯಾನ್ಸರ್​ನಿಂದ ಹೊರಬಂದು ಟೀಮ್​ ಇಂಡಿಯಾಗೆ ಮರುಪ್ರವೇಶ ಮಾಡಿದರು. ಆದರೆ, ಹಿಂದಿನ ಪ್ರದರ್ಶನ ತೋರಲು ಸಾಧ್ಯವಾಗದೆ 2017ರಲ್ಲಿ ಟೀಮ್​ ಇಂಡಿಯಾ ಪರ ಕೊನೆಯ ಪಂದ್ಯವನ್ನಾಡಿದರು. ಇನ್ನು ವೀರೇಂದ್ರ ಸೆಹ್ವಾಗ್ 2013ರಲ್ಲಿ ಕೊನೆಯ ಏಕದಿನ ಪಂದ್ಯವನ್ನಾಡಿದರು. ಜಹೀರ್ ಖಾನ್ 2012ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿದರು. ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಗೌತಮ್ ಗಂಭೀರ್ 2013ರಲ್ಲಿ ಟೀಮ್​ ಇಂಡಿಯಾ ಪರ ಕೊನೆಯ ಏಕದಿನ ಪಂದ್ಯ ಆಡಿದರು. ಹರ್ಭಜನ್ ಸಿಂಗ್ 2015ರವರೆಗೆ ತಂಡದಲ್ಲಿದ್ದರು. ಆದರೆ, ವಿಶ್ವಕಪ್ ಗೆದ್ದ ಸೂಪರ್ ಟೀಮ್ ಹೆಚ್ಚು ದಿನ ಮುಂದುವರೆಯಲು ಸಾಧ್ಯವಾಗಲಿಲ್ಲ. ಈ ವಿಚಾರದಲ್ಲಿ ನಾಯಕರಾಗಿದ್ದ ಧೋನಿ ಅವರ ಮೇಲೆಯೇ ಹೆಚ್ಚು ಆರೋಪವಿದೆ. ಫಿಟ್ನೆಸ್ ಹೆಸರಿನಲ್ಲಿ ಸೆಹ್ವಾಗ್, ಗಂಭೀರ್ ಮತ್ತು ಜಹೀರ್ ಖಾನ್ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂಬ ಆರೋಪಗಳಿವೆ.

ನಾಯಕನಾಗಿ ಧೋನಿಗೆ ಯಾವ ರೀತಿಯ ತಂಡ ಬೇಕು ಎಂದು ನಿರ್ಧರಿಸುವ ಹಕ್ಕು ಮತ್ತು ಜವಾಬ್ದಾರಿ ಎರಡೂ ಇದೆ. ಆ ಕ್ರಮದಲ್ಲಿ ತಮ್ಮ ತಂಡ ಫಿಟ್ ಆಗಬೇಕು ಎಂದು ಯೋಚಿಸಿದ ಧೋನಿ, ಹಿರಿಯರನ್ನು ಬದಿಗಿಟ್ಟರು. ಈ ಕಾರಣಕ್ಕಾಗಿ ದಿಗ್ಗಜ ಕ್ರಿಕೆಟಿಗರಾದ ಯುವಿ, ಸೆಹ್ವಾಗ್, ಗಂಭೀರ್ ಮತ್ತು ಜಹೀರ್ ಖಾನ್ ಅವರಿಗೆ ಸರಿಯಾದ ವಿದಾಯ ಸಿಗಲಿಲ್ಲ ಎಂದು ಹಲವರು ಧೋನಿಯನ್ನು ಟೀಕಿಸುತ್ತಾರೆ. ಆದರೆ, ಅದರಲ್ಲಿ ಹೆಚ್ಚಿನ ಸತ್ಯಾಂಶವಿಲ್ಲ. ಉತ್ತಮ ನಿವೃತ್ತಿ ವಿಚಾರದಲ್ಲಿ ಧೋನಿಯನ್ನು ಮಾತ್ರ ದೂರುವುದು ಸರಿಯಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐ ಕೂಡ ಈ ನಿರ್ಧಾರದ ಭಾಗವಾಗಿದೆ.

ಧೋನಿ ಎಲ್ಲಿಯೂ ನನ್ನಿಂದಲೇ ಎಲ್ಲವೂ ಆಯಿತು ಎಂದು ಹೇಳಿಕೊಳ್ಳಲಿಲ್ಲ. ಇದೆಲ್ಲ ಮಾಧ್ಯಮ ಮತ್ತು ಅಭಿಮಾನಿಗಳ ಸೃಷ್ಟಿ ಅಷ್ಟೆ. ಕ್ರಿಕೆಟ್ ಅನ್ನು ಹುಚ್ಚಾಗಿ ಪ್ರೀತಿಸುವ ನಮ್ಮ ದೇಶದಲ್ಲಿ ಒಬ್ಬ ಕ್ರಿಕೆಟಿಗ ಸತತ ಯಶಸ್ಸು ಕಾಣುತ್ತಿದ್ದರೆ ಅವನ ಮೇಲಿನ ಅಭಿಮಾನ ಎಲ್ಲೆಯನ್ನು ಮೀರುತ್ತದೆ. ಸಾಧಿಸಿದಾಗ ಹೊಗಳುವುದು ಸಹಜ. ಅದಕ್ಕೆ ಧೋನಿಯನ್ನು ದೂರುವುದು ಮೂರ್ಖತನ. ಎಷ್ಟೇ ಶ್ರೇಷ್ಠ ತಂಡವಾಗಿದ್ದರೂ ಸರಿಯಾದ ನಾಯಕ ಕೂಡ ಅಗತ್ಯ. ಧೋನಿ ಶ್ರೇಷ್ಠ ನಾಯಕ ಎಂಬುದರಲ್ಲಿ ಸಂದೇಹವಿಲ್ಲ. 2007 ರಿಂದ 2013 ರ ನಡುವೆ ಕೇವಲ 6 ವರ್ಷಗಳಲ್ಲಿ ಮೂರು ಪ್ರತಿಷ್ಠಿತ ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಶ್ರೇಷ್ಠ ನಾಯಕ. ಇದನ್ನು ಸಾಧಿಸಲು ಅದ್ಭುತ ತಂಡವೂ ಅವರಿಗೆ ಸಿಕ್ಕಿತು. ಹೀಗಾಗಿ ಟೀಮ್​ ಇಂಡಿಯಾ ಚಾಂಪಿಯನ್ ಆಯಿತು. ಹಿರಿಯರ ವಿಚಾರದಲ್ಲಿ ಸಣ್ಣಪುಟ್ಟ ತಪ್ಪುಗಳ ಹೊರತಾಗಿ ಮೂರು ಕಪ್ ನೀಡಿದ ಮಹೇಂದ್ರ ಸಿಂಗ್ ಧೋನಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net