ಬೆಂಗಳೂರು: ಕಿರಣ್ ಸುಬ್ರಮಣಿ ನಿದೇಶಿಸಿ, ನಟಿಸಿರುವ ಚಿತ್ರ ‘ಸಿ’. ಇದೊಂದು ತಂದೆ-ಮಗಳ ಬಾಂಧವ್ಯ ಹಾಗೂ ಮೆಡಿಕಲ್ ಕ್ರೈಂ ಸುತ್ತ ಸಾಗುವ ಕಥೆ. ಕಣ್ಣು ಕಾಣದ ಮಗಳು ಮೈಸೂರಿಗೆ ಹೋಗಬೇಕು ಅಂತ ಆಸೆಪಡುತ್ತಾಳೆ. ಆಕೆಯ ಆಸೆಯನ್ನು ತಂದೆ ಹೇಗೆ ನಿರ್ವಹಿಸುತ್ತಾರೆ ಎಂಬುದೇ ‘ಸಿ’. ಈ ಚಿತ್ರದ ಮೂರು ಗೀತೆಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಕಿರಣ್ ಸುಬ್ರಮಣಿ ಸೇರಿ ಪ್ರಶಾಂತ್ ನಟನ, ಸಾನ್ವಿಕಾ, ಚೈತ್ರಾ, ಮಧುಮಿತ, ರೂಪೇಶ್ ಆರ್ಯ ತಾರಾಗಣದಲ್ಲಿದ್ದಾರೆ.
ಇತ್ತೀಚೆಗಷ್ಟೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಟ ರಾಜವರ್ಧನ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಿರಣ್ ಸುಬ್ರಮಣಿ, ‘ಈ ಸಿನಿಮಾ ಮಾಡಲು ನನ್ನ ತಂದೆ ನನಗೆ ಸಂಪೂರ್ಣ ಬೆಂಬಲ ನೀಡಿದರು. 22 ದಿನಗಳ ಕಾಲ ಮೈಸೂರು, ಬೆಂಗಳೂರು, ಮಂಡ್ಯದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ಶೀರ್ಷಿಕೆ ‘ಸಿ’ ಆಕರ್ಷಕವಾಗಿದೆ. ಸಿ ಎಂದರೆ ನೋಟ ಎಂದರ್ಥ. ಟ್ರೇಲರ್‌ನಲ್ಲಿ ಕೇವಲ ಒಂದೇ ನೋಟವನ್ನು ತೋರಿಸಲಾಗಿದ್ದು, ಇನ್ನೆರಡು ನೋಟವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು’ ಎಂದು ಮಾಹಿತಿ ನೀಡುತ್ತಾರೆ. ಚಿತ್ರಕ್ಕೆ ಎ.ಬಿ. ಮುರುಳೀಧರ ಸಂಗೀತ, ನವೀನ್ ಸೂರ್ಯ ಛಾಯಾಗ್ರಹಣ, ನವೀನ್ ಸುಂದರ್ ಸಂಕಲನ ಇರಲಿದೆ. ಸಿನಿಮಾ ಇದೇ ತಿಂಗಳ 23ರಂದು ರಿಲೀಸ್ ಆಗಲಿದೆ.