ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿರುವ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ್(Yatnal )ಬಣ ಭಾನುವಾರ ಸಂಜೆ ದಿಲ್ಲಿಗೆ ತೆರಳುವ ಮುನ್ನ ಬೆಳಗ್ಗೆ ದಾವಣಗೆರೆಯಲ್ಲಿ ತಾಲೀಮು ನಡೆಸಿತು.
ವಾಲ್ಮೀಕಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಶನಿವಾರ ರಾತ್ರಿ ದಾವಣಗೆರೆಗೆ ಆಗಮಿಸಿದ್ದ ಯತ್ನಾಳ್ ಬೆಂಬಲಿಗರು ಮಾಜಿ ಸಂಸದ ಜಿ. ಎಂ.ಸಿದ್ದೇಶ್ವರ ಅವರ ಜಿಎಂಐಟಿ ಅತಿಥಿ ಗೃಹದಲ್ಲಿ ತಂಗಿದ್ದರು. ಬೆಳಗ್ಗೆ 45 ನಿಮಿಷಕ್ಕೂ ಅಧಿಕ ಸಮಯ ಗೌಪ್ಯ ಸಭೆ ನಡೆಸಿದರು.
ವರಿಷ್ಠರ ಎದುರು ವಿಜಯೇಂದ್ರ ಕುರಿತು ಪ್ರಸ್ತಾಪಿಸಬಹುದಾದ ಹೊಸ ವಿಷಯಗಳ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೆ ಯಾರನ್ನು ಕಣಕ್ಕಿಳಿಸಬೇಕು? ಶ್ರೀರಾಮುಲು ಹೆಸರು ತೇಲಿ ಬಿಡುವುದು, ಅಧ್ಯಕ್ಷರ ಬದಲಾವಣೆಗೆ ಒತ್ತಡ ತಂತ್ರ ಅನುಸರಣೆ ಹೇಗೆ? ಎಂಬ ಅಂಶಗಳು ಪ್ರಧಾನವಾಗಿ ಚರ್ಚೆಗೆ ಬಂದವು.
ವಾಲ್ಮೀಕಿ ಜನಾಂಗದ ಜನರೇ ಹೆಚ್ಚು ಸೇರಿದ್ದ ಜಾತ್ರಾ ಕಾರ್ಯಕ್ರಮದಲ್ಲಿ ಅದೇ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಬಿಜೆಪಿ ರಾಜ್ಯಾಧ್ಯಕ್ಷ ಯಾಕಾಗಬಾರದು ಎಂದು ಯತ್ನಾಳ್ ಪ್ರಶ್ನಿಸಿದ್ದು ಬೆಳಗಿನ ಚರ್ಚೆಗೆ ಪುಷ್ಟಿ ಕೊಟ್ಟಂತಿತ್ತು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಸವರಾಜ ಬೊಮ್ಮಾಯಿ ಅವರನ್ನು ರೆಬಲ್ಸ್ ಟೀಂ ಭೇಟಿ ಮಾಡಿತು. ಇದಾದ ಬಳಿಕ ಮಾತನಾಡಿದ ಯತ್ನಾಳ್ ತಟಸ್ಥ ಬಣದವರು ಈಗ ಪರಿವರ್ತನೆಯಾಗಿದ್ದಾರೆ ಎನ್ನುವ ಮೂಲಕ ತಮ್ಮ ಬಣದ ಬಲ ಹೆಚ್ಚಿದೆ ಎಂದು ಹೇಳಿಕೊಂಡರು.
ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಜಿ.ಎಂ.ಸಿದ್ದೇಶ್ವರ, ಕುಮಾರ ಬಂಗಾರಪ್ಪ , ಬಿ. ಪಿ.ಹರೀಶ್ ಹಾಗೂ ಇತರರು ಸಭೆಯಲ್ಲಿದ್ದರು. ಇನ್ನು ಜಾತ್ರೆಗೆ ಖುದ್ದು ವಿಜಯೇಂದ್ರ ಬರಬೇಕಿತ್ತಾದರೂ ದಿಲ್ಲಿಯಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಪ್ರವಾಸ ರದ್ದುಗೊಳಿಸಿದರು. ಬಿ.ಸಿ.ಪಾಟೀಲ್, ರೇಣುಕಾಚಾರ್ಯ ಪಾಲ್ಗೊಂಡಿದ್ದರು.
ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಯತ್ನಾಳ್ ಟೀಂ ದಿಲ್ಲಿಗೆ ಹೋದ ಮಾತ್ರಕ್ಕೆ ಏನೂ ಆಗುವುದಿಲ್ಲ. ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಕುಟುಂಬ ರಾಜಕಾರಣದ ಕುರಿತು ಚರ್ಚಿಸುವುದರಲ್ಲಿ ಅರ್ಥವಿಲ್ಲ. ಕುಮಾರ ಬಂಗಾರಪ್ಪ, ಜಾರಕಿಹೊಳಿ, ಸಿದ್ದೇಶ್ವರ, ಹರೀಶ್ ಎಲ್ಲರೂ ಆ ಹಿನ್ನೆಲೆಯಲ್ಲೇ ಬಂದವರು. ಡಾಕ್ಟರ್ ಮಗ ವೈದ್ಯನಾಗಲು ಬಯಸುವಂತೆ ರಾಜಕಾರಣಿಯ ಮಕ್ಕಳು ರಾಜಕಾರಣಿ ಆಗಲು ಬಯಸಿದರೆ ತಪ್ಪೇನು?
ಬಿ.ಸಿ.ಪಾಟೀಲ್, ಮಾಜಿ ಸಚಿವರು.
ಮನಸ್ಸು ಒಂದುಗೂಡಿಸುವುದು ಒಳ್ಳೆಯ ವಿಚಾರ
ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಯಾತ್ರೆ ಮಾಡುವುದಾಗಿ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿರುವುದನ್ನು ಸ್ವಾಗತಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ನಾವು ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧವಿದ್ದೇವೆ. ದೆಹಲಿಯಲ್ಲಿ ಎಎಪಿ ಹೀನಾಯವಾಗಿ ಸೋಲಲು ಅವರ ಭ್ರಷ್ಟಾಚಾರವೇ ಕಾರಣವಾಗಿದೆ. ಆದ್ದರಿಂದ ರಾಜ್ಯದಲ್ಲಿ ಭ್ರಷ್ಟಾಚಾರಮುಕ್ತ ವ್ಯವಸ್ಥೆ ಬರಬೇಕಿದೆ ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ವಿಜಯೇಂದ್ರ ಪರವಾಗಿ, ನಮ್ಮ ವಿರುದ್ಧವಾಗಿ ವರದಿಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ದೆಹಲಿಯಲ್ಲಿ ರಾಷ್ಟ್ರೀಯ ನಾಯಕರು ಸಿಗುತ್ತಾರೋ ಇಲ್ಲವೋ ಎನ್ನುವುದನ್ನು ನಿಮಗೇಕೆ ಹೇಳಲಿ?. ನಾವು ದೆಹಲಿಗೆ ಹೋಗುತ್ತೇವೆ, ನಮ್ಮ ಪ್ರಯತ್ನ ಮಾಡುತ್ತೇವೆ. ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಲು ನಾನೂ ಅರ್ಹನಿದ್ದೇನೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಎರಡು ಹಂದಿಗಳಿವೆ. ಹಾದಿ ಬೀದಿಯಲ್ಲಿ ಮಾತನಾಡುವ ಅವರಿಗೆ ನಾನೇಕೆ ಉತ್ತರ ನೀಡಲಿ ಎಂದು ಬಿ.ವೈ. ವಿಜಯೇಂದ್ರ ಬಣದ ಇಬ್ಬರು ಮುಖಂಡರ ವಿರುದ್ಧ ಅವರ ಹೆಸರು ಹೇಳದೇ ಹರಿಹಾಯ್ದರು.