

ಫಿರೋಜಾಬಾದ್: ಸಣ್ಣ ಮಕ್ಕಳು ಜಗಳವಾಡೋದು ಸಹಜ. ಆಟ ಸಾಮಾನಿಗೋ, ತಿಂಡಿಗೋ, ಇನ್ಯಾವುದಕ್ಕೋ ಜಗಳ ಆಡಿಕೊಳ್ಳುತ್ತಾರೆ. ಅಪ್ಪ-ಅಮ್ಮನ ಬಳಿ ಹಠ ಮಾಡಿದರೆ ಸಹಪಾಠಿಗಳಲ್ಲಿ ಜಗಳ ಆಡುತ್ತಾರೆ. ಇದು ಎಲ್ಲರ ಬಾಲ್ಯದ ಸಹಜ ವಿಷಯ. ಆದರೆ ಈ ಶಾಲೆಯಲ್ಲಿ ಮಾತ್ರ, ಸಣ್ಣ ಮಕ್ಕಳ ಜಗಳ ಒಬ್ಬ ಬಾಲಕನ ದುರಂತ ಅಂತ್ಯದಲ್ಲಿ ಕೊನೆಯಾಗಿದೆ.
ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಕಿಶನ್ಪುರ ಗ್ರಾಮದ ಪ್ರಾಥಮಿಕ ಶಾಲೆಯೊಂದರಲ್ಲಿ ಸಹಪಾಠಿಗಳೊಂದಿಗೆ ಶಿವಂ ಎನ್ನುವ ಬಾಲಕ ಹೊಡೆದಾಡಿಕೊಂಡಿದ್ದ. ಈ ಸಂದರ್ಭ ಎರಡನೇ ತರಗತಿಯ ಬಾಲಕ ಶಿವಂ (7) ಎಂಬಾತ ಮಂಗಳವಾರ ಮೃತಪಟ್ಟಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ಸೋಮವಾರ ಶಿಕೊಹಾಬಾದ್ನ ಶಾಲೆಯಲ್ಲಿ ಹೊಡೆದಾಟ ನಡೆದಿದ್ದು ಈ ಸಂದರ್ಭ ಒಬ್ಬ ಬಾಲಕ ಶಿವಂ ಎದೆಯ ಮೇಲೆ ಹಾರಿದ್ದಾನೆ’ ಎಂದು ಶಿಕೊಹಾಬಾದ್ ಠಾಣೆಯ ಅಧಿಕಾರಿ ಹರ್ವಿಂದ್ರ ಮಿಶ್ರಾ ಮಾಹಿತಿ ನೀಡಿದರು.
ಜೊತೆಗೆ ‘ತಕ್ಷಣವೇ ಶಿವಂನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ ಚಿಕಿತ್ಸೆ ಫಲಕಾರಿ ಆಗದೆ ಮಂಗಳವಾರ ಮೃತಪಟ್ಟ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿಯನ್ನೂ ಈ ಬಗ್ಗೆ ಪ್ರಶ್ನಿಸಲಾಗುತ್ತಿದೆ’ ಎಂದರು.