ಎರಡನೇ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆ: ರಾಜ್ಯಕ್ಕೆ ಒಂದು ಸಾವಿರ ವೈದ್ಯಕೀಯ ಸೀಟು ಹೆಚ್ಚಳ

Medical prescription
Published on

ಎನ್.ಎಲ್. ಶಿವಮಾದು

ಬೆಂಗಳೂರು: ದೇವನಹಳ್ಳಿಯ ಆಕಾಶ್, ಬೆಂಗಳೂರಿನ ಫಾರೂಕ್ ವೈದ್ಯಕೀಯ ಕಾಲೇಜುಗಳಿಗೆ ತಲಾ 100 ಸೀಟುಗಳು ಸೇರಿ ಎರಡನೇ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆಗೆ ರಾಜ್ಯಕ್ಕೆ ಒಟ್ಟು ಒಂದು ಸಾವಿರ ಹೆಚ್ಚುವರಿ ವೈದ್ಯಕೀಯ ಸೀಟುಗಳು ಲಭ್ಯವಾಗಲಿವೆ.

ರಾಷ್ಟ್ರೀಯ ವೈದ್ಯಕೀಯ ಆರೋಗವು (ಎನ್‌ಎಂಸಿ) ಶನಿವಾರ ಎರಡನೇ ಸುತ್ತಿನ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ್ದು, ಈ ಮೊದಲು ಹೆಚ್ಚಳವಾಗಿದ್ದ 450 ಸೀಟುಗಳು ಒಳಗೊಂಡಂತೆ ರಾಜ್ಯಕ್ಕೆ ಎರಡನೇ ಸುತ್ತಿಗೆ ಒಟ್ಟು ಒಂದು ಸಾವಿರ ವೈದ್ಯಕೀಯ ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಲಿವೆ.

ವೈದ್ಯಕೀಯ (ಯುಜಿನೀಟ್) ಕೌನ್ಸೆಲಿಂಗ್‌ಗೆ ಹೆಚ್ಚುವರಿಯಾಗಿ ಎಂಬಿಬಿಎಸ್ ಸೀಟುಗಳು ಲಭ್ಯವಾಗಿರುವುದು ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳಲ್ಲಿ ಸಂತಸ ಮೂಡಿದೆ. ನೀಟ್ ಫಲಿತಾಂಶದ ಬಳಿಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಸುತ್ತಿನ ಸೀಟು ಹಂಚಿಕೆಗೆ 9,263 ಸೀಟುಗಳು ಲಭ್ಯವಿದ್ದವು. ಇದೀಗ 18 ಸಂಸ್ಥೆಗಳಲ್ಲಿ ಒಂದು ಸಾವಿರ ಸೀಟುಗಳು ಒಳಗೊಂಡಂತೆ 10,263 ವೈದ್ಯಕೀಯ ಮತ್ತು 2619 ದಂತ ವೈದ್ಯಕೀಯ ಸೀಟುಗಳು ಸೇರಿವೆ. ಒಟ್ಟು 13,332 ಸೀಟುಗಳು ಲಭ್ಯವಾದಂತಾಗಿದೆ.

ಯಾವೆಲ್ಲ ಸಂಸ್ಥೆಗಳಲ್ಲಿ ಸೀಟುಗಳು ಲಭ್ಯ?

ದೇವನಹಳ್ಳಿಯ ಆಕಾಶ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಬೆಂಗಳೂರಿನ ಫಾರೂಕ್ ಅಕಾಡೆಮಿ ಆ್ ಮೆಡಿಕಲ್ ಎಜುಕೇಷನ್ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ತಲಾ 100 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ.

ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸ್‌ಗೆ 50, ಹಾರೋಹಳ್ಳಿಯ ಡಾ. ಚಂದ್ರಮ್ಮ ದಯಾನಂದ ಸಾಗರ್ ವೈದ್ಯಕೀಯ ಕಾಲೇಜಿಗೆ 50, ಈಸ್ಟ್ ಪಾಯಿಂಟ್ ವೈದ್ಯಕೀಯ ಕಾಲೇಜಿಗೆ 50, ಜಗದ್ಗುರು ಗಂಗಾಧರ್ ಮಹಾಸ್ವಾಮಿಗಳು ಮೂರು ಸಾವಿರ ಮಠ ಮೆಡಿಕಲ್ ಕಾಲೇಜು (ಜೆಜಿಎಂಎಂಎಂಸಿ) 50, ಪಿಇಎಸ್ ವೈದ್ಯಕೀಯ ಕಾಲೇಜಿಗೆ 50, ಬಿಎಂ ಪಾಟೀಲ್ ವೈದ್ಯಕೀಯ ಕಾಲೇಜು ವಿಜಯನಗರ, ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಸೇರಿ ಖಾಸಗಿ ಕಾಲೇಜುಗಳಿಗೆ 600 ಸೀಟುಗಳು ಲಭ್ಯವಾಗಿವೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳಾದ ಬೆಳಗಾವಿ, ಚಿಕ್ಕಬಳ್ಳಾಪುರ, ಕಲಬುರಗಿ, ಹಾಸನ, ಮೈಸೂರು, ರಾಯಚೂರು, ಅಟಲ್ ಬಿಹಅರಿ ವಾಜಪೇಯಿ ವೈದ್ಯಕೀಯ ಕಾಲೇಜು, ವಿಜಯನಗರ ವೈದ್ಯಕೀಯ ಕಾಲೇಜಿಗೆ ತಲಾ 50 ಸೀಟುಗಳಂತೆ 400 ಸೀಟುಗಳು ಹೆಚ್ಚಳವಾಗಿವೆ.

ಈ ಮೊದಲು ಸೆ.2ರಂದು ಪ್ರಕಟಿಸಿದ್ದ ಹೆಚ್ಚುವರಿ ಸೀಟುಗಳಲ್ಲಿ ಎಂಟು ಸರ್ಕಾರಿ ಕಾಲೇಜು ಮತ್ತು ಜೆಜಿಎಂಎಂಎಂಸಿ 50 ಸೇರಿ 450 ಸೀಟುಗಳನ್ನು ಹೆಚ್ಚಳ ಮಾಡಲಾಗಿತ್ತು. ಶನಿವಾರ ಪ್ರಕಟಿಸಿರುವ ಮತ್ತೊಂದು ಸುತ್ತಿನ ಸಿಟು ಹೆಚ್ಚಳ ಮಾಡಲಾಗಿದೆ.

ಕರ್ನಾಟಕ್ಕೆ ಹೆಚ್ಚು ಸೀಟು:

ಎರಡನೇ ಸುತ್ತಿನಲ್ಲಿ ದೇಶಾದ್ಯಂತ 808 ಸಂಸ್ಥೆಗಳಿಗೆ 5,6794 ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 1,000 ಸೀಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ರಾಜ್ಯದ ಆಕಾಂಕ್ಷಿಗಳಿಗೆ ಭರ್ಜರಿ ಉಡುಗೊರೆ ನೀಡಲಾಗಿದೆ.

ಎರಡನೇ ಸುತ್ತಿಗೆ ಎರಡೂವರೆ ಸಾವಿರ ಸೀಟು ಲಭ್ಯ ಈಗಾಗಲೇ ನಡೆದಿರುವ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 8321 ವೈದ್ಯಕೀಯ ಮತ್ತು 720 ದಂತ ವೈದ್ಯಕೀಯ ಸೀಟುಗಳು ಭರ್ತಿಯಾಗಿವೆ. ಎರಡನೇ ಸುತ್ತಿಗೆ ಹೊಸ ಒಂದು ಸಾವಿರ ಸೀಟು, ಉಳಿಕೆಯಾಗಿರುವ 943 ವೈದ್ಯಕೀಯ, 542 ದಂತ ವೈದ್ಯಕೀಯ ಸೀಟುಗಳು ಸೇರಿ ಅಂದಾಜು 2,484 ಸೀಟುಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಎನ್‌ಎಂಸಿ ಹೊಸದಾಗಿ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್‌ಗೆ ಅನುಗುಣವಾಗಿ ವೇಳಾಪಟ್ಟಿ ಪ್ರಕಟಿಸಿ ಸೀಟು ಹಂಚಿಕೆ ಮಾಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಎರಡನೇ ಸುತ್ತಿನ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯದಲ್ಲಿ ಪ್ರಕ್ರಿಯೆ ಆರಂಭವಾಗಲಿದೆ. - ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net