ಪಡುಬಿದ್ರಿ: ಕಡಲ್ ಫಿಶ್ ಕ್ರಿಕೆಟರ್ಸ್ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ- 2024 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನ.16, 17, 18ರಂದು ನಡೆಯಲಿದೆ ಎಂದು ಸಂಸ್ಥೆ ಉಪಾಧ್ಯಕ್ಷ ವಿಶ್ವಾಸ್ ವಿ. ಅಮೀನ್ ತಿಳಿಸಿದರು.
ಪಂದ್ಯಾಟದಲ್ಲಿ ಶ್ರೀಲಂಕಾ ತಂಡ, ಮಂಗಳೂರ ಹಾಗೂ ಉಡುಪಿ ಸಹಿತ ವಿವಿಧ ರಾಜ್ಯಗಳ ಟೆನ್ನಿಸ್ ಬಾಲ್ ತಂಡಗಳು ಸೇರಿ 16 ತಂಡಗಳು ಭಾಗವಹಿಸಲಿವೆ. ಪ್ರಥಮ ಸ್ಥಾನಕ್ಕೆ 5 ಲಕ್ಷ ರೂ. ನಗದು ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನಕ್ಕೆ 3 ಲಕ್ಷ ರೂ.ನಗದು ಮತ್ತು ಶಾಶ್ವತ ಫಲಕ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಡಲ್ ಫಿಶ್ ಸ್ಥಾಪಕ ಅಧ್ಯಕ್ಷ ಚೇತನ್ ಕುಮಾರ್ ಮಾತನಾಡಿ, ಎಂಆರ್‌ಜಿ ಗ್ರೂಪ್ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ನ.16ರಂದು ಸಂಜೆ 6 ಗಂಟೆಗೆ ಟೂರ್ನಿ ಉದ್ಘಾಟಿಸುವರು. ಸಂಸ್ಥೆ ಉಪಾಧ್ಯಕ್ಷ ನವೀನಚಂದ್ರ ಜೆ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಪಾಲ್ಗೊಳ್ಳುವರು. ನ.18ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮತ್ತಿತರರು ಭಾಗವಹಿಸುವರು ಎಂದರು. ಸಂಘಟಕರಾದ ಸಂತೋಷ್ ಪಡುಬಿದ್ರಿ, ರಚನ್ ಸಾಲ್ಯಾನ್, ಪಾಂಡು ಕರ್ಕೇರ ಉಪಸ್ಥಿತರಿದ್ದರು.