

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಉಳ್ಳಾಲ ಮತ್ತು ಸೋಮೇಶ್ವರ ಕಡಲ್ಕೊರೆತ ತಡೆ ನಿಟ್ಟಿನಲ್ಲಿ ಬುಧವಾರ ಸ್ಪೀಕರ್ ಯು.ಟಿ.ಖಾದರ್ ಸಭೆ ನಡೆಸಿ ಕಾಮಗಾರಿ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೋಟೆಪುರ, ಮೊಗವೀರಪಟ್ಣ, ಸೀಗ್ರೌಂಡ್ ಉಚ್ಚಿಲ, ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಗಳಾಗಿದ್ದು ಕಾಮಗಾರಿಗೆ ದುಡ್ಡು ಬಿಡುಗಡೆಯಾಗಿ ಆರು ತಿಂಗಳಾದರೆ, ಟೆಂಡರ್ ಆಗಿ ಒಂದೂವರೆ ತಿಂಗಳಾಗಿದೆ. ಆದರೆ ಕೆಲಸ ಇನ್ನೂ ಆರಂಭಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೆಲಸ ಯಾವಾಗ ಆರಂಭಿಸುತ್ತೀರಿ? ಮಳೆ ಶುರುವಾದ ಬಳಿಕ ಕೆಲಸ ಹೇಗೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಕಡಲ್ಕೊರೆತ ಕೇವಲ 15 ದಿನ ಮಾತ್ರ ಇರುತ್ತದೆ. ಬಳಿಕ ಎಲ್ಲಿ ಆಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಬಟ್ಟಪ್ಪಾಡಿಯಲ್ಲಿ ಶಾಶ್ವತ ಕೆಲಸ ನಡೆಯಬೇಕಿದ್ದು ಸ್ಥಳೀಯರು, ಮೀನುಗಾರರೊಂದಿಗೆ ಚರ್ಚಿಸಿ, ಎನ್‌ಐಟಿಕೆಯನ್ನೂ ಸೇರಿಸಿಕೊಳ್ಳಿ. ಇಲ್ಲಿ ಅರೆಬರೆ ಕೆಲಸ ಮಾಡುವುದು ಬೇಡ. ಹತ್ತು ವರ್ಷ ನೀವು ಏನೂ ಮಾಡಿಲ್ಲ. ಈಗ ಒಂದೊಮ್ಮೆಗೆ ಎಲ್ಲ ಕಡೆ ಕೆಲಸ ಮಾಡುತ್ತೇವೆ ಎಂದರೆ ಆಗುತ್ತಾ? ಯಾವುದಾದರೂ ಒಂದು ಕೆಲಸ ಮರ್ಯಾದೆಯಲ್ಲಿ ಮಾಡಿ. ಕೊಟ್ಟ ಕೆಲಸವನ್ನೇ ಮಾಡಲು ನಿಮಗೆ ಆಗುವುದಿಲ್ಲ. ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ದುಡ್ಡು ಇಟ್ಟು ನೀವು ಯಾರನ್ನು ಸಮಾಧಾನಪಡಿಸಲು ಹೊರಟಿದ್ದೀರಿ? ಅಗತ್ಯ ಇರುವಲ್ಲಿ ಕೆಲಸ ಮುಗಿಸಿ ಎಂದು ಸೂಚನೆ ನೀಡಿದರು.
ಈ ಸಂದರ್ಭ ಅಧಿಕಾರಿಗಳು ವಿವಿಧ ನೆಪಗಳನ್ನು ಹೇಳಿದರು. 150 ಮೀ. ಜೆಟ್ಟಿ ಮಾಡಬೇಕಾದರೂ ಜಾಗ ಅಗತ್ಯವಿದೆ. ಈಗಾಗಲೇ ಕೋಟೆಪುರ ಮಸೀದಿ ಬಳಿ 200 ದೋಣಿಗಳು ನಿಲ್ಲುತ್ತಿವೆ. ಸರ್ಕಾರಿ ಜಾಗ ಇದೆ ಎಂದು ಸ್ಥಳೀಯರೊಬ್ಬರು ತಿಳಿಸಿದರೂ ಅದು ಮಸೀದಿಯ ವಕ್ಫ್ ಜಾಗ ಎಂದು ಅಧಿಕಾರಿಗಳು ಸಬೂಬು ಹೇಳಿದರು. ನಾನು ಮಸೀದಿ ಸಮಿತಿಯಲ್ಲಿದ್ದೇನೆ. ಯಾವುದು ವಕ್ಫ್ ಎಂದು ನನಗೆ ಗೊತ್ತಿದೆ ಎಂದು ಅಧಿಕಾರಿಗಳಿಗೆ ಯು.ಟಿ.ಖಾದರ್ ತಿರುಗೇಟು ನೀಡಿದರು.
ಉಳ್ಳಾಲ ತಹಸೀಲ್ದಾರ್ ಪುಟ್ಟರಾಜು, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಅಭಿಯಂತ ದಿವಾಕರ್ ನಾಯಕ್, ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ದಯ್ಯ, ಉಪನಿರ್ದೇಶಕ ರಘು, ಸುಶ್ಮಿತಾ ಮೊದಲಾದವರು ಉಪಸ್ಥಿತರಿದ್ದರು.
ನಿಮ್ಮದೇ ತಲೆಬಿಸಿ ಆಗಿದೆ
ಕೋಟೆಪುರ ಮೀನುಗಾರಿಕಾ ಜೆಟ್ಟಿ ಏನಾಯಿತು? ನಮ್ಮ ಒತ್ತಡ ಕಡಿಮೆ ಮಾಡಲು ನಿಮ್ಮನ್ನು ತರುವುದು. ಈಗ ನಿಮ್ಮದೇ ತಲೆಬಿಸಿ ಆಗಿದೆ. ನೀವು ಉದ್ಯಮಿಗಳ ಪರವಾಗಿ ಮಾತಾಡಬೇಡಿ. ನಿಮಗೆ ಊರಿನ ಬಗ್ಗೆ ಏನೂ ಗೊತ್ತಿಲ್ಲ. ಕಚೇರಿಯಲ್ಲಿ ಕುಳಿತು ಯೋಜನೆ ಕಳಿಸುತ್ತೇನೆ ಎಂದರೆ ಹೇಗೆ? ನನಗೆ ಸಮಯ ಇದ್ದರೆ ನಾನೇ ಸ್ಥಳಕ್ಕೆ ಹೋಗಿ ಯೋಜನೆ ರೂಪಿಸುತ್ತಿದ್ದೆ ಎಂದು ಸ್ಪೀಕರ್ ಯು.ಟಿ.ಖಾದರ್ ಗದರಿದರು.
ಬಫರ್ ರೆನ್ ಬಗ್ಗೆ ನಿರುತ್ತರ
ನದಿ ಬದಿಯ ಬಫರ್ ಝೋನ್ ಎಷ್ಟು ಮೀಟರ್ ಇದೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮುಖ-ಮುಖ ನೋಡಿಕೊಂಡರು. 6ರಿಂದ 12 ಮೀಟರ್ ಇದೆ. ಅಲ್ಲಿ ಏನೂ ಮಾಡಲಾಗದು. ಈ ಬಗ್ಗೆ ನಿಮಗೇ ಗೊತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೋಪಗೊಂಡ ಯು.ಟಿ.ಖಾದರ್, ಉಳ್ಳಾಲದ ಸಣ್ಣ ಮೀನುಗಾರರಿಗಾಗಿ ರೂಪಿಸಿದ ಯೋಜನೆಯಿದು. ಈಗ ಸಣ್ಣ ಯೋಜನೆಯಾದರೂ ಮುಂದಿನ 30 ವರ್ಷಗಳಲ್ಲಿ ದೊಡ್ಡ ಬಂದರು ಆಗಿ ಪರಿವರ್ತನೆ ಆಗಲಿದೆ ಎಂದು ತಿಳಿಸಿದರು.
ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡುವುದಿಲ್ಲ
ಮಂಗಳೂರಿಗೆ ಮುಖ್ಯಮಂತ್ರಿ ಬರಲಿದ್ದು ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ ಮತ್ತು ಉಳ್ಳಾಲ ಉರುಸ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಉದ್ಘಾಟನೆ ಮುಂದಿನ ಬಾರಿ ನೆರವೇರಿಸಲಿದ್ದಾರೆ. ಉಳ್ಳಾಲಕ್ಕೆ ಸಾವಿರ ಕೋಟಿ ರೂ. ಅನುದಾನ ನೀಡಿದ್ದು ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಉಳ್ಳಾಲದ ಜನತೆ ಮಾಡಲಿದ್ದಾರೆ ಎಂದು ಯು.ಟಿ.ಖಾದರ್ ತಿಳಿಸಿದರು.