

ಉಳ್ಳಾಲ: ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಇಂದು ಸ್ವಾತಂತ್ರ್ಯ ದಿನ ಸಂಭ್ರಮದಿಂದ ಆಚರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸ್ವಾತಂತ್ರ್ಯಪೂರ್ವ ಮತ್ತು ನಂತರದ ಐತಿಹಾಸಿಕ ಛಾಯಾಚಿತ್ರಗಳನ್ನು ವೀಕ್ಷಿಸುವುದು ಒಂದು ಅಪೂರ್ವ ಅನುಭವ ಎಂದು ನರಿಂಗಾನ ಗ್ರಾಪಂ ಅಧ್ಯಕ್ಷ ಎಂ.ಬಿ.ನವಾಝ್ ಹೇಳಿದರು.
ಸ್ವಾತಂತ್ರ್ಯ ದಿನದ ಪ್ರಯುಕ್ತ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಆಶ್ರಯದಲ್ಲಿ ನರಿಂಗಾನ ಗ್ರಾಮದ ಕಲ್ಲರಕೋಡಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ಜೀವವಿಜ್ಞಾನ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯ್ಕ ಬೈಂದೂರು ಸಂಗ್ರಹಿಸಿರುವ ಸ್ವಾತಂತ್ರ್ಯಪೂರ್ವ ಮತ್ತು ನಂತರದ ದಿನಗಳ ಐತಿಹಾಸಿಕ ಘಟನೆಗಳ ಛಾಯಾಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಪ್ರದರ್ಶನದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟ ಸಂದರ್ಭದ ಹಲವಾರು ಅವಿಸ್ಮರಣೀಯ ಘಟನೆಗಳ ಸುಮಾರು ನೂರು ಛಾಯಾಚಿತ್ರಗಳು, ಸ್ವಾತಂತ್ರ್ಯ ಹೋರಾಟಗಾರರ ಮತ್ತು ಭಾರತದ ಮಹಾನ್ ದಾರ್ಶನಿಕರ ಸಹಿಗಳೊಂದಿಗೆ ಅವರ ನುಡಿಮುತ್ತುಗಳು, ಮಹಾತ್ಮರ ಸಂದರ್ಶನದ ವಿಡಿಯೋ ಸಾಕ್ಷೃ ಚಿತ್ರಗಳನ್ನು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಸ್ಮಾರ್ಟ್ ಫೋನ್ನಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸಲಾಯಿತು. ವಿದ್ಯಾರ್ಥಿಗಳು, ಶಿಕ್ಷಕರು, ಊರಿನ ನಾಗರಿಕರು ಪ್ರದರ್ಶನ ವೀಕ್ಷಿಸಿದರು.
ಮುಖ್ಯಶಿಕ್ಷಕಿ ನಯನ ಕುಮಾರಿ ಕೆ. ಸ್ವಾಗತಿಸಿದರು. ಸುಜಾತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು.