

ಬಂಟ್ವಾಳ: ಮಕ್ಕಳಿಗೆ ಎಳವೆಯಲ್ಲಿ ವಿಜ್ಞಾನದ ಬೆಳವಣಿಗೆ, ತಂತ್ರಜ್ಞಾನದ ಮಾಹಿತಿ ದೊರೆತಾಗ ಯಾವುದೇ ವಿಚಾರಗಳ ಸತ್ಯ ತಿಳಿಯುತ್ತದೆ. ಇದರಿಂದ ಮೂಢನಂಬಿಕೆಗಳು ನಾಶವಾಗುತ್ತವೆ. ವಿದ್ಯಾರ್ಥಿಗಳು ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್ ಹೇಳಿದರು.
ನರಿಕೊಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ಪ್ರಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಕ್ಕಳು ಪ್ರದರ್ಶಿಸಿದ ವಿಜ್ಞಾನ ಮಾದರಿ ವೀಕ್ಷಿಸಿ ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಮಾದರಿ ತಯಾರಿಸಿ ಪ್ರದರ್ಶಿಸಿದರು.
ಹಳೇ ವಿದ್ಯಾರ್ಥಿ ಜಗದೀಶ್ ಶಾಲಾ ಗ್ರಂಥಾಲಯಕ್ಕೆ 20 ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ಹಸ್ತಾಂತರಿಸಿದರು. ಕರ್ನಾಟಕ ಸರ್ಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸಂತೋಷ್ ಕುಮಾರ್ ತುಂಬೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾಲಕರು ಭಾಗವಹಿಸಿದ್ದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸುಜಾತಾ ವಂದಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.