ರಾಷ್ಟ್ರೀಯ ಅಂತರಿಕ್ಷ ದಿನಾಚರಣೆ; ನೆಹರು ತಾರಾಲಯದಲ್ಲಿ ಕಾರ್ಯಕ್ರಮ

Space
Published on

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಹೆಚ್ಚಿಸಬೇಕು. ಆ ನಿಟ್ಟಿನಲ್ಲಿ ರಾಜ್ಯ ಸರಕಾರ ವಿವಿಧ ಯೋಜನೆ ಅನುಷ್ಟಾನಗೊಳಿಸಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಶುಕ್ರವಾರ ಜವಾಹರ ಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ಅಂತರಿಕ್ಷ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದ ತಾಂತ್ರಿಕ ಸಾಮರ್ಥ್ಯವನ್ನ ಇಡೀ ಜಗತ್ತಿಗೆ ಸಾರಿ ಹೇಳಿದ ಆ.23ನ್ನು ‘ರಾಷ್ಟ್ರೀಯ ಅಂತರಿಕ್ಷ ದಿನ’ ಎಂದು ಆಚರಿಸಲಾಗುತ್ತಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆಯನ್ನು ಇಳಿಸಿದ ಮೊದಲ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುವ ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದೆ. ನಮ್ಮ ವಿಜ್ಞಾನಿಗಳ ಈ ಸಾಧನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಅಂತರಿಕ್ಷ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದುವಂತೆ ಪ್ರೇರೇಪಿಸಿದೆ.

ರಾಜ್ಯದಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಕ್ಷೇತ್ರದ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನಮ್ಮ ಸರಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ರಾಜ್ಯದ 833 ವಸತಿ ಶಾಲೆಗಳಿಗೆ ಟೆಲಿಸ್ಕೋಪ್‌ಗಳನ್ನು ಒದಗಿಸಲಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನ ಹೆಚ್ಚಾಗಲಿದೆ. ಜವಾಹರಲಾಲ್ ನೆಹರು ತಾರಾಲಯದ ಆವರಣವನ್ನು ಇನ್ನಷ್ಟು ಆಕರ್ಷಕಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಸೂರ್ಯನ ಅಧ್ಯಯನಕ್ಕೆ ತೆರಳಿರುವ ಆದಿತ್ಯ ಎಲ್ 1 ಉಪಗ್ರಹದ ನೈಜ ಗಾತ್ರದ ಪ್ರತಿರೂಪವನ್ನು ತಾರಾಲಯದ ಆವರಣದಲ್ಲಿ ಅಳವಡಿಸಲಾಗುವುದು ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಉಪಾಧ್ಯಕ್ಷ ಡಾ. ಟಿ. ಕೆ. ಆಲೆಕ್ಸ್, ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಗುರುಪ್ರಸಾದ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

"ನೆಹರು ತಾರಾಲಯದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬೋಧನಾ ಕೊಠಡಿಗಳು, ಆಡಿಯೋ, ವಿಡಿಯೋ ವಿಷ್ಯೂಯಲ್ ಸಲಕರಣೆಗಳನ್ನು ಅಳವಡಿಸಿರುವ ನೂತನ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲೇ ಉದ್ಘಾಟನೆ ಮಾಡಲಾಗುವುದು."

- ಎನ್.ಎಸ್.ಬೋಸರಾಜು,ವಿಜ್ಞಾನ, ತಂತ್ರಜ್ಞಾನ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net