ಆಟೋ ಟ್ರಕ್‌ಗೆ ಡಿಕ್ಕಿ: ಸಿಸಿಟಿವಿ ಕ್ಯಾಮೆರಾದಲ್ಲಿನ ಭೀಕರ ದೃಶ್ಯ ವೈರಲ್​- ಆಟೋದಲ್ಲಿದ್ದ ಮಕ್ಕಳ ಸ್ಥಿತಿ ಏನಾಯಿತು?

auto truck accident
Published on

ಅಮರಾವತಿ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬುಧವಾರ ಆಟೋ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಕ್ಕಳು ಗಾಯಗೊಂಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

ಬೆಳಗ್ಗೆ 7 ಗಂಟೆ ಸುಮಾರಿಗೆ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಖಾಸಗಿ ಶಾಲೆಗೆ ಆಟೋ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಸಂಗಮ ಶರತ್ ಥಿಯೇಟರ್ ಜಂಕ್ಷನ್‌ನಲ್ಲಿ ಲಾರಿಗೆ ಆಟೋ ಅಡ್ಡಲಾಗಿ ಬಂದಿದ್ದು, ಡಿಕ್ಕಿಯಾಗುತ್ತಿದ್ದಂತೆ ಮುಗುಚಿದೆ.

ಬೆಳಗ್ಗೆ 7.35ಕ್ಕೆ ಫ್ಲೈಓವರ್‌ನ ಕೆಳಗೆ ಕ್ರಾಸಿಂಗ್‌ಗೆ ಟ್ರಕ್ ಸಮೀಪಿಸಿದಾಗ ಎಡಭಾಗದಿಂದ ವೇಗವಾಗಿ ಬರುತ್ತಿದ್ದ ಆಟೋ ಅದರೊಳಗೆ ನುಗ್ಗಿದೆ. ಲಾರಿ ನಿಲ್ಲಿಸಲು ವಿಫಲವಾದ ಕಾರಣ ಶಾಲಾ ಮಕ್ಕಳು ಆಟೋದಿಂದ ಹೊರಬಿದ್ದಿದ್ದಾರೆ.

ಕೆಲವೇ ಸೆಕೆಂಡುಗಳಲ್ಲಿ, ಹಲವಾರು ಬೈಕುಗಳು ಮತ್ತು ಕಾರುಗಳು ನಿಲ್ಲುತ್ತವೆ. ಗಾಯಗೊಂಡವರಿಗೆ ಸಹಾಯ ಮಾಡಲು ಜನರು ಓಡಿ ಬರುತ್ತಾರೆ. ಪಲ್ಟಿಯಾದ ಆಟೋ, ಅದರ ಕೆಳಗೆ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಲು ಮುಂದಾದರು.

ಎಂಟು ಶಾಲಾ ಮಕ್ಕಳ ಪೈಕಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋದಲ್ಲಿದ್ದ ಎಂಟು ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ಅವರಲ್ಲಿ ನಾಲ್ವರು ಡಿಸ್ಚಾರ್ಜ್ ಆಗಿದ್ದಾರೆ. ಮೂವರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ವಿದ್ಯಾರ್ಥಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು‘ ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಆಟೋ ಓವರ್ ಲೋಡ್ ಆಗಿದ್ದು, ಎರಡೂ ವಾಹನಗಳ ಚಾಲಕರನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾನೆ ಸಮಯದಲ್ಲಿ ಟ್ರಕ್ ಅನ್ನು ಓಡಿಸಲು ಅನುಮತಿಸಲಾಗಿದೆಯೇ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net