

ಜೈಪುರ: ವಿದ್ಯಾರ್ಥಿಗಳ ಭವಿಷ್ಯ ನಿಂತಿರುವುದು ಅವರ ವಿದ್ಯಾಭ್ಯಾಸದ ಮೇಲೆ. ಕಷ್ಟಪಟ್ಟು ವರ್ಷಪೂರ್ತಿ ನಿರಂತರವಾಗಿ ಶ್ರಮಿಸಿ, ಬಹುಅಂಕಗಳಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಬೇಕು, ತಮ್ಮ ಹೆತ್ತವರಿಗೆ ಗೌರವ, ಸಂತೋಷ ನೀಡಬೇಕು ಎಂದು ಬಯಸುವ ಅದೆಷ್ಟೋ ಸಂಖ್ಯೆಯ ವಿದ್ಯಾರ್ಥಿಗಳಿಗೆ ಕಾಪಿ ಹೊಡೆದು ಪಾಸ್ ಆಗುವ ಅನ್ಯಾಯ ಮಾರ್ಗಗಳನ್ನು ಕಂಡಾಗ ಬಹಳ ಬೇಸರವಾಗುತ್ತದೆ. ಶ್ರಮವಹಿಸಿ ನ್ಯಾಯವಾಗಿ ಬರೆಯುವ ನಮಗೆ ಇಂತಹ ಮೋಸ ಆಗುವುದು ಏಕೆ ಎಂದು ಅನೇಕ ವಿದ್ಯಾರ್ಥಿಗಳು ಈ ಕುರಿತು ಆಕ್ಷೇಪಣೆ ಹೊರಹಾಕುತ್ತಾರೆ. ಆದ್ರೆ, ಇಲ್ಲೊಬ್ಬ ಶಿಕ್ಷಕ ತಮ್ಮ ಸರ್ಕಾರಿ ಶಾಲೆಯಲ್ಲಿ ಎಕ್ಸಾಂಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಕಾಪಿ ಹೊಡೆಯಲು ಸಹಾಯ ಮಾಡಿದ್ದಲ್ಲದೇ ಇದು ಯಾರಿಗೂ ಗೊತ್ತಾಗದಿರಲು ಆತ ಮಾಡಿಕೊಂಡಿದ್ದ ಕಿಲಾಡಿ ಐಡಿಯಾ ಕಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ದಂಗಾಗಿದ್ದಾರೆ.
ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ವರದಿಯಾಗಿದೆ. ಜೈಪುರದ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು, ಈ ವೇಳೆ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪರೀಕ್ಷೆಗೆ ತಯಾರಾಗಿದ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹಸ್ತಾಂತರಿಸಿದ ಶಿಕ್ಷಕ ಕೆಲವೇ ನಿಮಿಷಗಳಲ್ಲಿ ಅದಕ್ಕೆ ಉತ್ತರವನ್ನು ಕೂಡ ಕೊಟ್ಟಿರುವ ವಿಷಯ ಸದ್ಯ ಅಧಿಕಾರಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ. ತರಗತಿಯೊಳಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಸ್ವತಃ ಶಿಕ್ಷಕನೇ ಬೋರ್ಡ್ ಮೇಲೆ ಬರೆಯುತ್ತ ಹೋಗಿದ್ದಾರೆ. ಈ ಮೂಲಕ ಸಾಮೂಹಿಕವಾಗಿ ಕಾಪಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಸದ್ಯ ಈ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದಿದ್ದು, ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿ ವಿರುದ್ಧ ಭಾರೀ ಅಸಮಾಧಾನ ಹೊರಹಾಕಿದ್ದಾರೆ.
ರಾಜಸ್ಥಾನ ಶಿಕ್ಷಣ ಇಲಾಖೆಯ ವಿಜಿಲೆನ್ಸ್ ಸ್ಕ್ವಾಡ್ ಮತ್ತು ರಾಜ್ಯ ಮಟ್ಟದ ಫ್ಲೈಯಿಂಗ್ ಸ್ಕ್ವಾಡ್ ದೇಚುವಿನ ಸರ್ಕಾರಿ ಮಧ್ಯಮ ಶಾಲೆಯ ಶಿಕ್ಷಕನ ಮೇಲೆ ಅನುಮಾನಗೊಂಡು ನಡೆಸಿದ ದಾಳಿಯಲ್ಲಿ ಆರೋಪಿ ಶಿಕ್ಷಕ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಕಾಪಿ ಹೊಡೆಯಲು ಸಹಾಯ ಮಾಡಿದ್ದ ಶಿಕ್ಷಕನನ್ನು ಇದೀಗ ಅಧಿಕಾರದಿಂದ ವಜಾಗೊಳಿಸಿದ್ದಲ್ಲದೇ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ತಾನು ಉತ್ತರ ಹೇಳಿಕೊಡುತ್ತಿರುವುದು ಯಾರಿಗೂ ಗೊತ್ತಾಗಬಾರದು ಎಂದು ಆತ ಶಾಲೆಯ ಗೇಟ್ಗೆ ಬೀಗ ಹಾಕಿಸುವ ಮೂಲಕ ಹೊರಗಿನಿಂದ ಬಂದವರೆಗೆ ಒಳಗೆ ಪ್ರವೇಶವಿಲ್ಲದಂತೆ ಮಾಡಿದ್ದಾನೆ. ಇದರಿಂದ ಅನುಮಾನ ಮತ್ತಷ್ಟು ಹೆಚ್ಚಾಗಿ, ಸ್ಕ್ವಾಡ್ ಶಾಲಾ ಕಾಂಪೌಂಡ್ ಮೇಲತ್ತಿ ಆವರಣದೊಳಗೆ ಪ್ರವೇಶಿಸಿ, ಆತನನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದಾರೆ,(ಏಜೆನ್ಸೀಸ್).