ಅಂತಾರಾಷ್ಟ್ರೀಯ ವಿಮಾನ ಹಾರಾಟದ ಕುರಿತು ಕೇಂದ್ರ ಹೇಳಿರುವುದೇನು?

AIRPORT NEWS
Published on

ನವದೆಹಲಿ: ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ.

ಈ ಹಿಂದೆ ಆದೇಶ ಹೊರಡಿಸಿದ್ದ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ), ಜುಲೈ 15ರವರೆಗೆ ವಿಮಾನ ಸ್ಥಗಿತಗೊಳಿಸಲಾಗುವುದು ಎಂದು ಹೇಳಿತ್ತು. ಈ ಹೇಳಿಕೆಯ ಪ್ರಕಾರ ಜುಲೈ 16ರಿಂದ ಹೊರದೇಶಗಳ ವಿಮಾನಗಳ ಸಂಚಾರ ಆರಂಭವಾಗಬೇಕಿತ್ತು.

ಆದರೆ ಇದೀಗ ಕರೊನಾ ವೈರಸ್‌ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಾಗೂ ವಿಮಾನ ಪ್ರಯಾಣದಿಂದ ಅತಿವೇಗದಲ್ಲಿ ವೈರಸ್‌ ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಜುಲೈ 30ರವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಇಲ್ಲ ಎಂದು ಡಿಜಿಸಿಎ ತಿಳಿಸಿದೆ.

ಆದರೆ, ಆಯ್ದ ಮಾರ್ಗಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ನಿಗದಿತ ವಿಮಾನಗಳನ್ನು ಬಿಡಲು ಅನುಮತಿ ನೀಡಲಾಗುವುದು ಎಂದು ಸುತ್ತೋಲೆ ಹೇಳಿದೆ.

ಏರ್ ಇಂಡಿಯಾ ಮತ್ತು ಇತರ ಖಾಸಗಿ ದೇಶೀಯ ವಿಮಾನಯಾನ ಸಂಸ್ಥೆಗಳು ಕೇಂದ್ರ ಸರ್ಕಾರ ಮೇ 6 ರಂದು ಪ್ರಾರಂಭಿಸಿದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೆಲವು ವಿದೇಶಿಗರನ್ನೂ ಕರೆತಂದಿದೆ. ಆದರೆ ಅಧಿಕೃತವಾಗಿ ವಿಮಾನಗಳ ಹಾರಾಟವನ್ನು ಜುಲೈ 30ರವರೆಗೆ ಸ್ಥಗಿತಗೊಳಿಸಲಾಗುವುದು. ಮುಂದಿನ ಪರಿಸ್ಥಿತಿ ಅವಲೋಕಿಸಿ ಅವಧಿಯ ಕುರಿತು ತಿಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net