ಇಲಾಖೆಗಳಿಂದ ದಲಿತರಿಗೆ ಅನ್ಯಾಯ : ಮುಖಂಡರಿಂದ ಗಂಭೀರ ಆರೋಪ : ಪ.ಜಾ.-ಪ.ಪಂ. ಕುಂದುಕೊರತೆಗಳ ಸಭೆ

New Project (1)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪ.ಜಾತಿ ಪ.ಪಂಗಡಗಳ ಕುಂದುಕೊರತೆ ಸಭೆಯು ತಹಶೀಲ್ದಾರ್ ಪಥ್ವಿ ಸಾನಿಕ ಅಧ್ಯಕ್ಷತೆಯಲ್ಲಿ ಸೋಮವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ರೆಂಕೆದಗುತ್ತು, ನಾರಾವಿ ಹಾಗೂ ಇನ್ನಿತರ ಕಡೆಗಳಲ್ಲಿ ದಲಿತರು ಮನೆ ಕಟ್ಟಲು ಸರ್ಕಾರಿ ಭೂಮಿ ಒತ್ತುವರಿ ಮಾಡಿದರೆ ಕಂದಾಯ ಇಲಾಖೆ ತ್ವರಿತಗತಿಯಲ್ಲಿ ತೆರವುಗೊಳಿಸಲು ಮುಂದಾಗಿ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ದಲಿತ ಮುಖಂಡರಾದ ಸಂಜೀವ ಆರ್., ಬಿ.ಕೆ.ವಸಂತ್, ರಮೇಶ್ ಆರ್., ಶೇಖರ್ ಲಾಲ, ಶೇಖರ್ ಕುಕ್ಕೇಡಿ, ನೇಮಿರಾಜ್ ಕಿಲ್ಲೂರು ತಿಳಿಸಿದರು.

ತಾಲೂಕಿನ ಪ್ರತಿ ಮಂಡಲ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನಕ್ಕೆ 50 ಸೆಂಟ್ಸ್ ಜಾಗ ಮೀಸಲಿಡಲು ಸಭೆಯಲ್ಲಿ ದಲಿತ ಮುಖಂಡರು ಒತ್ತಾಯಿಸಿದರು.

ತಾಲೂಕಿನ ಸರ್ಕಾರಿ ಕ್ಷೇತ್ರದ ಉದ್ಯೋಗದಲ್ಲಿ ದಲಿತರಿಗೆ ಅನ್ಯಾಯ ಮಾಡಲಾಗುತ್ತಿದೆ. ದಲಿತರಿಗೆ ಕಸಗುಡಿಸುವ, ಕಚೇರಿ ತೆರೆಯುವ ಕೆಲಸ ನೀಡಲಾಗುತ್ತಿದೆ. ತಾರತಮ್ಯ ಮಾಡಿದ ಅಧಿಕಾರಿಗಳ ವಿರುದ್ಧ ನಾಗರಿಕ ಹಕ್ಕು ನಿರ್ದೇಶನಾಲಯದಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು.

ಕೊಯ್ಯೂರು ಭೀಮಂಡೆ ಎಂಬಲ್ಲಿ ಮೂರು ದಿನವಾದರೂ ವಿದ್ಯುತ್ ಬಂದಿಲ್ಲ ಲೈನ್‌ಮನ್‌ಗಳು ಕರೆ ಸ್ವೀಕರಿಸುತ್ತಿಲ್ಲ ಎಂದು ಬಿ.ಕೆ.ವಸಂತ್ ಆರೋಪಿಸಿದರು. ಇದಕ್ಕೆ ತಹಸೀಲ್ದಾರ್ ಈ ಬಗ್ಗೆ ಪರಿಶೀಲಿಸುವಂತೆ ಮೆಸ್ಕಾಂ ಎಇಇಗೆ ಸೂಚಿಸಿದರು.

ಸವಣಾಲು ಹಿತ್ತಿಲಪೆಲ ಎಂಬಲ್ಲಿ ತಕ್ಷಣ ಸೇತುವೆ ನಿರ್ಮಿಸಬೇಕೆಂದು ದಲಿತ ಮುಖಂಡರು ಶೇಖರ ಎಲ್. ಒತ್ತಾಯಿಸಿದರು. ಮುಗುಳಿ ಬಳಿ ಎರಡು ಹಾಸ್ಟೆಲ್‌ಗಳಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇವರು 5 ಕಿ.ಮೀ. ತನಕ ನಡೆದು ಹೋಗಬೇಕು. ಈ ಭಾಗಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಸಂಜೀವ ಆರ್., ಬಿ.ಕೆ.ವಸಂತ್ ಒತ್ತಾಯಿಸಿದರು.

ಬೆಳ್ತಂಗಡಿ ಸಮುದಾಯ ಆಸ್ಪತ್ರೆ ಡಿ ದರ್ಜೆ ನೌಕರಿಗೆ ಪ್ರತಿ ತಿಂಗಳು ವೇತನವಾಗುವಂತೆ ನೋಡಿಕೊಳ್ಳಬೇಕು. ಕರಂಬಾರು ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಾಗವನ್ನು ರಸ್ತೆಗೆ ಬಳಸಲಾಗುತ್ತಿದ್ದು,ಕಣಿಯೂರು ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನದಲ್ಲಿ ಉದ್ಘಾಟನೆಗೆ ಮೊದಲೇ ಸೋರುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ತಾಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್, ಸಮಾಜ ಕಲ್ಯಾಣಾಧಿಕಾರಿ ಧನಂಜಯ್ ಉಪಸ್ಥಿತರಿದ್ದರು.

ಹಾಸ್ಟೆಲ್ ವಿದ್ಯಾರ್ಥಿಗಳು ರಾತ್ರಿ ಬೀದಿ!

ಬೆಳ್ತಂಗಡಿ ಹಳೆಕೋಟೆ ಬಳಿ ಇರುವ ಹಾಸ್ಟೆಲ್‌ನಿಂದ ರಾತ್ರಿ 9ರ ನಂತರ ವಿದ್ಯಾರ್ಥಿಗಳು ಪೇಟೆ ಕಡೆ ಸುತ್ತಾಡುತ್ತಿರುತ್ತಾರೆ. ಹಾಸ್ಟೆಲ್‌ನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿ.ಕೆ. ವಸಂತ್ ಒತ್ತಾಯಿಸಿದರು. ಅಳದಂಗಡಿ ಕೆದ್ದು ಹಾಸ್ಟೆಲ್‌ನಲ್ಲಿಯೂ ಇದೇ ಸ್ಥಿತಿ ಇದೆ ಎಂದು ಸಭೆಯಲ್ಲಿ ಆರೋಪ ಕೇಳಿಬಂತು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕತ್ತಲೆಯಲ್ಲಿ ಜೀವನ

ಸುಲ್ಕೇರಿಮೊಗ್ರು ಮಾಳಿಗೆ ಪಂಗಡ ಕಾಲನಿಗೆ ಹಲವಾರು ವರ್ಷಗಳಿಂದ ವಿದ್ಯುತ್ ಇಲ್ಲದೆ ಇಲ್ಲಿನ ಕುಟುಂಬಗಳು ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದು, ಇದಕ್ಕೆ ಸರ್ಕಾರಿ ಮಟ್ಟದ ಸಚಿವರಲ್ಲಿ ಮೂರು ಮೂರು ಬಾರಿ ಭೇಟಿ ಮಾಡಿ ವಿದ್ಯುತ್ ಅನುಮೋದನೆ ಪಡೆಯುದಿರುತ್ತೇವೆ. ಕಾಮಗಾರಿ ನಡೆಯುತ್ತಿದ್ದು, ದೀಪಾವಳಿ ಒಳಗೆ ಈ ಕುಟುಂಬಗಳ ಮನೆ ಬೆಳಗಿಸಿ ಎಂದು ಜಿಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ ಒತ್ತಾಯಿಸಿದರು. ಇದಕ್ಕೆ ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಎಇಇ ಬೆಂಜಮಿನ್ ಬ್ರಾಕ್ಸ್ ಉತ್ತರಿಸಿ ಅಕ್ಟೋಬರ್ ಒಳಗಡೆ ಕಾಮಗಾರಿ ಪೂರ್ಣಗೊಳಿಸಿ ಸಂಪರ್ಕ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net