

ನವದೆಹಲಿ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್ನ 7250 ಕೋಟಿ ರೂ. ಷೇರುಗಳನ್ನು ತಲಾ ಹತ್ತು ರೂಪಾಯಿನಂತೆ ಖರೀದಿಸಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಿರ್ಧರಿಸಿದೆ. ಇದರಿಂದ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ 7,250 ಕೋಟಿ ರೂಪಾಯಿ ಬಂಡವಾಳ ಸಿಗಲಿದೆ.
ಎಸ್ಬಿಐನ ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿ ಬುಧವಾರ ನಡೆದ ಸಭೆಯಲ್ಲಿ ಷೇರು ಖರೀದಿಗೆ ಸಮ್ಮತಿ ನೀಡಿತು. ಷೇರು ಖರೀದಿಯು ಆರ್ಬಿಐ ನಿಯಂತ್ರಣ ನಿಯಮಗಳಿಗೆ ಒಳಪಟ್ಟಿರುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಎಸ್ಬಿಐನ ಷೇರು ಯೆಸ್ ಬ್ಯಾಂಕ್ನ ಪೇಯ್್ಡ ಅಪ್ ಬಂಡವಾಳದ ಶೇ. 49 ಇರಲಿದೆ. ಈ ಬಗ್ಗೆ ಬ್ಯಾಂಕ್ ಕಳೆದ ವಾರ ಒಂದು ಕರಡು ಯೋಜನೆ ಪ್ರಕಟಿಸಿತ್ತು. ಎಸ್ಬಿಐ ಅನ್ನು ‘ಹೂಡಿಕೆ ಬ್ಯಾಂಕ್’ ಎಂದು ಕರಡಿನಲ್ಲಿ ನಮೂದಿಸಲಾಗಿತ್ತು. ಕರಡು ಯೋಜನೆ ಬಗ್ಗೆ ಸಾರ್ವಜನಿಕರು, ಬ್ಯಾಂಕ್ನ ಷೇರುದಾರರು, ಠೇವಣಿದಾರರು ಮತ್ತು ಸಾಲದಾತರಿಂದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸಲಹೆಗಳನ್ನು ಆಹ್ವಾನಿಸಿತ್ತು.
ಭ್ರಷ್ಟಾಚಾರ ಹಾಗೂ ಹಣ ದುರುಪಯೋಗ ಆರೋಪಗಳ ಮೇಲೆ ಜಾರಿ ನಿರ್ದೇಶನಾಲಯ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ನನ್ನು ಬಂಧಿಸಿದೆ. ಅವರ ಪತ್ನಿ, ಮೂವರು ಪುತ್ರಿಯರಲ್ಲದೆ ಇತರ ಹಲವರ ಮೇಲೆಯೂ ಇ.ಡಿ. ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಮೊಕದ್ದಮೆಗಳನ್ನು ದಾಖಲಿಸಿದೆ.