ತೂಕ ಇಳಿಸಿ, ಫಿಟ್​ ಆಗಿದ್ರು ಆಯ್ಕೆಯಿಂದ ಹೊರಗೆ! ಟೆಸ್ಟ್​ ಸರಣಿಯಿಂದ ಸರ್ಫರಾಜ್​ ಕೈಬಿಟ್ಟ ಬಗ್ಗೆ BCCI ಸ್ಪಷ್ಟನೆ

ವಿಜಯವಾಣಿ - 2025-09-25T153312.183
Published on

BCCI: ​ಮುಂಬರುವ ವೆಸ್ಟ್​ ಇಂಡೀಸ್​ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಇದೀಗ ಭಾರತ ತಂಡ ಅಧಿಕೃತವಾಗಿ ಪ್ರಕಟವಾಗಿದೆ. ಕ್ಯಾಪ್ಟನ್ ಆಗಿ ತಂಡವನ್ನು ಶುಭಮನ್​ ಗಿಲ್ ಮುನ್ನಡೆಸಿದರೆ, ಉಪನಾಯಕನಾಗಿ ರವೀಂದ್ರ ಜಡೇಜಾ ಕಣಕ್ಕಿಳಿಯಲಿದ್ದಾರೆ. ಈ ಮಧ್ಯೆ ಮತ್ತೊಮ್ಮೆ ಟೆಸ್ಟ್​ ತಂಡದಿಂದ ಸರ್ಫರಾಜ್ ಖಾನ್​ರನ್ನು ಕೈಬಿಟ್ಟ ಬಗ್ಗೆ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಕಳೆದ ಜೂನ್, ಆಗಸ್ಟ್‌ನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದ ಅಭಿಮನ್ಯು ಈಶ್ವರನ್, ಶಾರ್ದೂಲ್ ಠಾಕೂರ್ ಮತ್ತು ಕರುಣ್ ನಾಯರ್ ಸೇರಿ ಒಂದಷ್ಟು ಆಟಗಾರರನ್ನು ವೆಸ್ಟ್​ ಇಂಡೀಸ್​ ಟೆಸ್ಟ್​ ಸರಣಿಗೆ ಬಿಸಿಸಿಐ ಪರಿಗಣಿಸಿಲ್ಲ. ಆದರೆ, ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನವೇ ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡು, ದೇಶಿಯ ಕ್ರಿಕೆಟ್​ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸರ್ಫರಾಜ್​ ಖಾನ್​ರನ್ನು ಮತ್ತೊಮ್ಮೆ ಆಯ್ಕೆಯಿಂದ ಹೊರಗಿಟ್ಟ ಬಿಸಿಸಿಐ ನಿರ್ಧಾರದ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ.

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದ ಹಿನ್ನೆಲೆ ಸರ್ಫರಾಜ್, ಭಾರತ ಎ ತಂಡದ ಪರ ಹಲವು ಪಂದ್ಯಗಳನ್ನಾಡಿದರು. ಈ ವೇಳೆ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು, ದೇಶಿಯ ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕದಾಟ ಪ್ರದರ್ಶಿಸಿದ್ದು ಬಿಸಿಸಿಐ ಆಯ್ಕೆಗಾರರನ್ನು ಪ್ರಶ್ನಿಸುವಂತೆ ಮಾಡಿತು. ಇಂಗ್ಲೆಂಡ್​ ಸರಣಿ ಬಳಿಕ ಇದೀಗ ವೆಸ್ಟ್​ ಇಂಡೀಸ್​ ಟೆಸ್ಟ್​ ಸರಣಿಯಿಂದಲೂ ಅವರನ್ನು ತಂಡದಿಂದ ಕೈಬಿಟ್ಟಿದ್ದೇಕೆ ಎಂಬ ಪ್ರಶ್ನೆಗೆ ಕಡೆಗೂ ಬಿಸಿಸಿಐ ಉತ್ತರಿಸಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಸರ್ಫರಾಜ್​ ಖಾನ್​ರನ್ನು ಕೈಬಿಡಲು ಕಾರಣವೇನು? ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅರ್ಗಕರ್​, "ಖಾನ್​ ಇಂಜುರಿಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net