ಪದಾರ್ಪಣೆ ಪಂದ್ಯದಲ್ಲೇ ವೇಗದ ಅರ್ಧಶತಕ; ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಸರ್ಫರಾಜ್​

Sarfaraz Khan
Published on

ರಾಜ್​ಕೋಟ್​: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರು ಮೊದಲ ದಿನದಂತ್ಯಕ್ಕೆ ಪ್ರವಾಸಿ ತಂಡದೆದುರು ಉತ್ತಮ ಮೊತ್ತ ಪೇರಿಸಿದ್ದು, ಎರಡನೇ ದಿನದ ಅಂತ್ಯಕ್ಕೆ ಬೃಹತ್​ ಮೊತ್ತ ಪೇರಿಸುವ ಮುನ್ಸೂಚನೆ ನೀಡಿದೆ.

ಇನ್ನು ಈ ಪಂದ್ಯದ ಮೂಲಕ ಯುವ ಬ್ಯಾಟ್ಸ್​ಮನ್​ ಸರ್ಫರಾಜ್​ ಖಾನ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು, ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸುವ ಮೂಲಕ ಹೊಸ ದಾಖಲೆ ಒಂದನ್ನು ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ಸರ್ಫರಾಜ್​ ಖಾನ್​ ಪದಾರ್ಪಣೆ ಬೆನ್ನಲ್ಲೇ ಮೈದಾನದಲ್ಲಿ ಅವರ ತಂದೆ ಹಾಗೂ ಪತ್ನಿ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

48 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ ಚೊಚ್ಚಲ ಅರ್ಧಶತಕವನ್ನು ಪೂರೈಸಿದ ಸರ್ಫರಾಜ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೆ ಪಾತ್ರರಾದರು. ಸರ್ಫರಾಜ್ ಖಾನ್​ಗೂ ಮೊದಲು, ಹಾರ್ದಿಕ್ ಪಾಂಡ್ಯ (2017ರಲ್ಲಿ ಶ್ರೀಲಂಕಾ ವಿರುದ್ಧ), ಪಟಿಯಾಲದ ಯುವರಾಜ್​ (1934ರಲ್ಲಿ ಇಂಗ್ಲೆಂಡ್​ ವಿರುದ್ಧ) ಟೆಸ್ಟ್​​ ಕ್ರಿಕೆಟ್​ನಲ್ಲಿ ಅತಿ ವೇಗದ ಅರ್ಧತಕ ಬಾರಿಸಿದ ಮೊದಲಿಬ್ಬರು ಬ್ಯಾಟ್ಸ್​ಮನ್​ಗಳಾಗಿದ್ದಾರೆ.

ಭಾರತದ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಮೊದಲು, ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಸರ್ಫರಾಜ್ ಖಾನ್ 45 ಪ್ರಥಮ ದರ್ಜೆ ಪಂದ್ಯಗಳಲ್ಲಿ 69.85 ಸರಾಸರಿಯೊಂದಿಗೆ 3912 ರನ್ ಗಳಿಸಿದ್ದಾರೆ.ಇದರಲ್ಲಿ 14 ಶತಕ, 11 ಅರ್ಧಶತಕ, 1 ಟ್ರಿಪಲ್ ಶತಕ ಬಾರಿಸಿದ ಅದ್ಭುತ ದಾಖಲೆಯನ್ನು ಸರ್ಫರಾಜ್ ಖಾನ್ ಹೆಸರಿನಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net