ತಪ್ಪು ಮಾಡೋ ವಯಸ್ಸು ಇದು … ಸಾರಾ ಅಲಿ ಖಾನ್​ ಹೀಗೆ ಹೇಳಿದ್ದು ಯಾಕೆ?

Sara Ali Khan (2)
Published on

ಮುಂಬೈ: ಸೈಫ್​ ಅಲಿ ಖಾನ್​ ಮತ್ತು ಅಮೃತಾ ಸಿಂಗ್​ ಅವರ ಮಗಳು ಸಾರಾ ಅಲಿ ಖಾನ್​ ಒಂದು ತಪ್ಪು ಮಾಡಿದ್ದಾರಂತೆ. ಆ ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರಂತೆ. ಇಷ್ಟಕ್ಕೂ ಅವರು ಮಾಡಿರುವ ತಪ್ಪು ಏನು? ಅವರೇ ಈ ವಿಷಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಾರಾ, ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು 'ಕೇದಾರ್​ನಾಥ್​' ಚಿತ್ರದ ಮೂಲಕ. ಆ ಚಿತ್ರ ಹಿಟ್​ ಆಯಿತು. 'ಸಿಂಬ' ಸಹ ಸಾರಾಗೆ ಹೆಸರು ತಂದುಕೊಟ್ಟಿತು. ಆದರೆ, ಆ ನಂತರ ಬಿಡುಗಡೆಯಾದ 'ಲವ್​ ಆಜ್​ ಕಲ್​', 'ಕೂಲಿ ನಂಬರ್​ ಒನ್​' ಮತ್ತು 'ಅತರಂಗಿ ರೇ' ಚಿತ್ರಗಳು ಹೆಚ್ಚು ಸದ್ದು ಮಾಡಲಿಲ್ಲ. ಹೀಗೆ ಬ್ಯಾಕ್​ ಟು ಬ್ಯಾಕ್​ ಚಿತ್ರಗಳು ಸೋತಿದ್ದರ ಬಗ್ಗೆ ಸಾರಾ ಮನಬಿಚ್ಚಿ ಮಾತನಾಡಿದ್ದಾರೆ. ಅದು ತಮ್ಮದೇ ತಪ್ಪು ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಾರಾ, 'ಕಲಾವಿದರಾಗಿ ನಾವು ಪ್ರತಿ ದಿನ ಸಾಕಷ್ಟು ವಿಷಯಗಳನ್ನು ಕಲಿಯುತ್ತಿರುತ್ತೇವೆ. ಅದೇ ರೀತಿ ತಪ್ಪುಗಳನ್ನು ಸಹ ಮಾಡುತ್ತಿರುತ್ತೇವೆ. ಜನರಿಗೆ ಇಷ್ಟವಾಗದಂತಹ ಕೆಲವು ಸಿನಿಮಾಗಳನ್ನು ನಾನು ಮಾಡಿದ್ದೇನೆ. ಈ ತಪ್ಪುಗಳನ್ನು ನಾನು ಬೇಕಂತಲೇ ಮಾಡಿಲ್ಲ. ತನ್ನಷ್ಟಕ್ಕೆ ತಾನೇ ಆಗಿವೆ. ಈ ವಯಸ್ಸಿನಲ್ಲಿ ಈ ತರಹದ ತಪ್ಪುಗಳನ್ನು ಮಾಡುವುದು ಸಹಜ. ಈ ತರಹದ ತಪ್ಪುಗಳನ್ನು ಮಾಡುವುದು ಚಿತ್ರಜೀವನದ ಒಂದು ಭಾಗ' ಎಂದು ಸಾರಾ ಹೇಳಿಕೊಂಡಿದ್ದಾರೆ.

ಒಂದು ವರ್ಷದ ಹಿಂದೆ ಓಟಿಟಿಯಲ್ಲಿ ಬಿಡುಗಡೆಯಾದ 'ಅತರಂಗಿ ರೇ' ಚಿತ್ರ ಬಿಟ್ಟರೆ, ಸಾರಾ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. 'ಗ್ಯಾಸ್​ಲೈಟ್​', 'ಏ ವತನ್​ ಮೇರೆ ವತನ್​​', 'ಮೆಟ್ರೋ ಇನ್​ ದಿನೋ' ಮತ್ತು 'ಮರ್ಡರ್​ ಮುಬಾರಕ್​' ಚಿತ್ರದಲ್ಲಿ ಸಾರಾ ಅಲಿ ಖಾನ್​ ಅಭಿನಯಿಸುತ್ತಿದ್ದು, ಈ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net