ರುಕ್ಮಣಿಯ ವಸಂತಕಾಲ; ಸಪ್ತ ಸಾಗರದಾಚೆಯಿಂದ ನಟನೆ ಕಲಿತು ಬಂದ ಹುಡುಗಿ

rukmini
Published on

| ಪ್ರಮೋದ ಮೋಹನ ಹೆಗಡೆ

ಚಿಕ್ಕವಯಸ್ಸಿನಿಂದಲೇ ಭರತನಾಟ್ಯ, ನಾಟಕದಲ್ಲಿ ಆಸಕ್ತಿ ಹೊಂದಿದ್ದು, ನಂತರ ಲಂಡನ್‌ನ ನಾಟಕ ಶಾಲೆಯಲ್ಲಿ ತರಬೇತಿ ಪಡೆದು ‘ಬೀರ್‌ಬಲ್’ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್. ಹೇಮಂತ್ ರಾವ್ ನಿರ್ದೇಶಿಸಿರುವ, ರಕ್ಷಿತ್ ಶೆಟ್ಟಿ ಅಭಿನಯದ ಇಂದು ತೆರೆ ಕಾಣುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಪಾತ್ರ, ಸಿದ್ಧತೆ ಹಾಗೂ ಚಿತ್ರೀಕರಣದ ಅನುಭವದ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.

*ಸಿನಿಮಾ ರಂಗದತ್ತ ಒಲವು ಮೂಡಿದ್ದು ಹೇಗೆ?
-ತಾಯಿ ಭರತನಾಟ್ಯ ಕಲಾವಿದೆ. ಹೀಗಾಗಿ ನನಗೂ ಭರತನಾಟ್ಯದ ಮೇಲೆ ಆಸಕ್ತಿ ಹೆಚ್ಚಿತ್ತು. ನಂತರ ನಾಟಕದ ಕಡೆ ಹೆಜ್ಜೆ ಹಾಕಿದೆ. ವಿದ್ಯಾಭ್ಯಾಸಕ್ಕಿಂತ ಹೆಚ್ಚು ಖುಷಿ, ನಾಟಕದ ತಯಾರಿಯಲ್ಲಿ, ಅಭಿನಯಿಸುವಾಗ ಹಾಗೂ ಪ್ರದರ್ಶನ ಮುಗಿದ ಬಳಿಕ ಜನರ ಪ್ರತಿಕ್ರಿಯೆಯಲ್ಲಿ ಸಿಗುತ್ತಿತ್ತು. ಬಳಿಕ ಲಂಡನ್‌ನ ಡ್ರಾಮಾ ಸ್ಕೂಲ್‌ಗೆ ಅರ್ಜಿ ಹಾಕಿದೆ. 500 ಜನರಲ್ಲಿ 30 ಜನರನ್ನು ಆಯ್ಕೆ ಮಾಡುವ ಶಾಲೆಯಲ್ಲಿ ನನಗೂ ಪ್ರವೇಶ ಸಿಕ್ಕಿತು. ನಂತರ ಭಾರತಕ್ಕೆ ಬಂದು ನಾಟಕಗಳನ್ನು ಮಾಡುತ್ತಿರುವಾಗ ಸಿನಿಮಾ ಪ್ರಪಂಚಕ್ಕೆ ಹೋಗಬೇಕು ಅನ್ನಿಸಿತು. ಆಗ ಸಿಕ್ಕಿದ್ದೇ ‘ಬೀರ್‌ಬಲ್’.

*‘ಸಪ್ತ ಸಾಗರದಾಚೆ ಎಲ್ಲೋ’ ನಿಮಗೆ ಎಷ್ಟು ಮುಖ್ಯ?
-ಇದು ನನಗೆ ಹಲವು ಕಾರಣಗಳಿಗೆ ಸ್ಪೆಷಲ್. ಕರೋನಾ ಬಳಿಕ ನನಗೆ ಸಿಕ್ಕ ಮೊದಲ ಅವಕಾಶ ಇದು. ನಾನು ಆಗಷ್ಟೇ ಸಿನಿಮಾ ವೃತ್ತಿ ಶುರು ಮಾಡಿದ್ದೆ. ಆದರೆ, ಲಾಕ್‌ಡೌನ್‌ನಿಂದಾಗಿ ಎಲ್ಲಿಯೂ ಅವಕಾಶವಿರಲಿಲ್ಲ. ಆ ಸಂದರ್ಭದಲ್ಲಿ ಹೇಮಂತ್ ರಾವ್ ಅವರ ಇನ್‌ಸ್ಟಾಗ್ರಾಂ ಪೋಸ್ಟ್ ನೋಡಿ ನಾನೇ ಅವಕಾಶ ಕೇಳಿದೆ. ಆಡಿಷನ್‌ನಲ್ಲಿ ಸೆಲೆಕ್ಟ್ ಆಗಿದ್ದು ಒಳ್ಳೆಯ ಕಾಲ ಬಂತು ಎಂಬ ಸೂಚನೆಯಂತಿತ್ತು. ಹೇಮಂತ್ ಬರವಣಿಗೆಯಲ್ಲಿ ಸೀ ಪಾತ್ರಗಳಿಗೆ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಜತೆಗೆ ರಕ್ಷಿತ್ ಅವರ ಜತೆ ಅಭಿನಯಿಸಬಹುದು ಎಂಬ ಖುಷಿ.

  • ‘ಪ್ರಿಯಾ’ ಪಾತ್ರಕ್ಕೆ ತಯಾರಿ ಹೇಗಿತ್ತು?
    -ಈ ಚಿತ್ರದಲ್ಲಿ ‘ಮನು’ ಮತ್ತು ‘ಪ್ರಿಯಾ’ ನಡುವಿನ ಕೆಮಿಸ್ಟ್ರಿ ಬಹಳ ಮುಖ್ಯ. ಅದಕ್ಕಾಗಿ ಐದು ದಿನಗಳ ತರಬೇತಿ ನೀಡಿದರು. ಗಾಯಕಿಯಾಗಲು ಪ್ರಯತ್ನಿಸುತ್ತಿರುವ ಪಾತ್ರವಾದ ಕಾರಣ, ಗಾಯಕರ ಹಾವಭಾವವನ್ನು ಗಮನಿಸುತ್ತಿದ್ದೆ. ಹಲವು ಭಾವನಾತ್ಮಕ ಸನ್ನಿವೇಶಗಳಿವೆ. ಆ ಭಾವನೆ ಹೊರಹಾಕಬೇಕು ಅಂದರೆ ಅದಕ್ಕೂ ಮುಂಚೆ ‘ಪ್ರಿಯಾ’ ಮನಸ್ಥಿತಿ ಹೇಗಿರಬಹುದು ಎಂದು ಕಲ್ಪಿಸಿಕೊಂಡು ಮಾನಸಿಕವಾಗಿ ಸಿದ್ಧವಾಗುತ್ತಿದ್ದೆ.

*ಚಿತ್ರೀಕರಣದ ಅನುಭವ…
-ಭಾವನಾತ್ಮಕ ಸನ್ನಿವೇಶಗಳಲ್ಲಿ ನಾನು ಗ್ಲಿಸಿರಿನ್ ಬಳಸಬಾರದು ಎಂಬ ಹಠದಲ್ಲಿದ್ದೆ. ಹೀಗಾಗಿ, ಮಾನಸಿಕವಾಗಿ ಸಿದ್ಧವಾಗುತ್ತಾ, ಬಹಳ ಒತ್ತಡ ಹೇರಿಕೊಂಡುಬಿಟ್ಟಿದ್ದೆ. ಆಗ ಹೇಮಂತ್, ‘ನಟನೆ ಒತ್ತಡ ಹೇರಿಕೊಳ್ಳುವುದಲ್ಲ, ಒತ್ತಡದಿಂದ ಮುಕ್ತರಾಗುವುದು’ ಎಂದು ಹೇಳಿದ್ದರು. ಯಾವುದೇ ಸನ್ನಿವೇಶ ಇದ್ದರೂ ಹಲವಾರು ಬಾರಿ ಅದರ ಬಗ್ಗೆ ನಮಗೆ ಮಾಹಿತಿ ನೀಡುತ್ತಿದ್ದರು. ಆ ಪಾತ್ರದೊಳಗೆ ಪ್ರವೇಶಿಸಲು ನಮ್ಮೆಲ್ಲರಿಗೂ ಸಂಗೀತ ಬಹಳ ಮುಖ್ಯವಾಗಿತ್ತು. ಕೆಲವು ಸಂಗೀತದ ತುಣುಕು ಕೇಳುವುದು ವಿಚಿತ್ರ ಧ್ಯಾನದಂತೆ ಆಗಿತ್ತು. ಹೇಮಂತ್ ಮತ್ತು ರಕ್ಷಿತ್ ಜತೆ ಕೆಲಸ ಮಾಡಿದ್ದು, ಇನ್ನೊಂದು ಅಭಿನಯ ಶಾಲೆಯಲ್ಲಿ ಕಲಿತ ಅನುಭವವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net