

ಬೆಂಗಳೂರು: ಸಿಂಪಲ್ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಎ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ಗಳಿಸಿತು. ಕಳೆದ ಹಲವು ದಿನಗಳಿಂದ ಚಿತ್ರದ ಸೈಡ್ ಬಿ ರಿಲೀಸ್ ಡೇಟ್ನಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ಇದೀಗ ಈ ಕುರಿತಂತೆ ಚಿತ್ರತಂಡ ಅಧಿಕೃತ ದಿನಾಂಕವನ್ನು ಘೋಷಿಸಿದೆ.
ಹೇಮಂತ್ ರಾವ್ ನಿರ್ದೇಶನದ ಲವ್ ಸ್ಟೋರಿ ಸಿನಿಮಾದ ಸೈಡ್ ಬಿ ರಿಲೀಸ್ ದಿನಾಂಕದಲ್ಲಿ ಈ ಹಿಂದೆಯೇ ಗೊಂದಲ ಸೃಷ್ಟಿಯಾಗಿತ್ತು. ಅಕ್ಟೋಬರ್ 20 ರಂದು ಬಿಡುಗಡೆಗಯಾಗಲು ನಿಗದಿಯಾಗಿದ್ದ ಚಿತ್ರವು 27 ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಡೇಟ್ ಅನ್ನು ಬದಲಾಯಿಸಿತ್ತು. ಇದೀಗ ಮತ್ತೊಮ್ಮೆ ಬದಲಾವಣೆ ವಿಷಯ ಕೇಳಿಬಂದ ಬೆನ್ನಲ್ಲೇ ಸಿನಿಪ್ರೇಕ್ಷಕರು ತೀವ್ರ ಗೊಂದಲಕ್ಕಿಡಾಗಿದ್ದರು. ಸದ್ಯ ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರ ತಯಾರಕರು ಈಗ ಅಧಿಕೃತ ದಿನಾಂಕವನ್ನು ಪ್ರಕಟಿಸಿದ್ದಾರೆ.
'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಸಿನಿಮಾ ಇದೇ ನವೆಂಬರ್ 17, 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದ್ದು, ಮೂಲಗಳ ಪ್ರಕಾರ ಚಿತ್ರವು ಭಾರತೀಯ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣಲಿದೆ ಎಂದು ಹೇಳಲಾಗಿದೆ.
ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರ ಜೆ.ಆಚಾರ್, ಶರತ್ ಲೋಹಿತಾಶ್ವ ಸೇರಿದಂತೆ ಇತರರ ತಾರಾಗಣವಿದೆ. ಪರಂವಾ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).