

ಧರ್ಮಶಾಲಾ: ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ ಅಜೇಯವಾಗಿರುವ ತಂಡಗಳೆಂದರೆ ಆತಿಥೇಯ ಭಾರತ ಹಾಗೂ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್. ಸತತ 4 ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಇವೆರಡು ತಂಡಗಳು ಭಾನುವಾರ ನಯನಮನೋಹರವಾದ ಎಚ್ಪಿಸಿಎ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದ್ದು, ಇನ್ನು ಒಂದು ತಂಡಕ್ಕೆ ಮಾತ್ರ ಟೂರ್ನಿಯಲ್ಲಿ ಅಜೇಯ ಓಟ ವಿಸ್ತರಿಸುವ ಅವಕಾಶವಿದೆ. ಕಳೆದ 20 ವರ್ಷಗಳಿಂದ ಕಿವೀಸ್ ವಿರುದ್ಧ ಐಸಿಸಿ ಟೂರ್ನಿಗಳಲ್ಲಿ ಗೆಲ್ಲದ ಕೊರತೆಯನ್ನೂ ನೀಗಿಸುವ ಸವಾಲು ಕೂಡ ರೋಹಿತ್ ಶರ್ಮ ಬಳಗದ ಮುಂದಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಲಭ್ಯಕ್ಕೆ ಈ ಮಹತ್ವದ ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಗೈರಿನಲ್ಲಿ 6ನೇ ಬೌಲರ್ ಕೊರತೆ ಕಾಡದಂತೆ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲ ಕುಗ್ಗದಂತೆ ಆಡುವ 11ರ ಬಳಗವನ್ನು ರೂಪಿಸುವ ಸವಾಲು ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಮುಂದಿದೆ.
ಕಿವೀಸ್ ತಂಡ ಟೂರ್ನಿಯಲ್ಲೇ ಅತ್ಯಂತ ವೈವಿಧ್ಯತೆಯಿಂದ ಕೂಡಿದ ವೇಗ-ಸ್ಪಿನ್ ಬೌಲಿಂಗ್ ವಿಭಾಗವನ್ನು ಹೊಂದಿದ್ದರೆ, ಇತ್ತ ಭಾರತದ ಬ್ಯಾಟರ್ಗಳಾದ ರೋಹಿತ್ ಶರ್ಮ, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಈ ಮುಖಾಮುಖಿ ರೋಚಕವಾಗಿರುವ ನಿರೀೆ ಇದೆ. ಭಾರತಕ್ಕೆ ಗೆದ್ದರೆ ಕಿವೀಸ್ ತಂಡವನ್ನು ಹಿಮ್ಮೆಟ್ಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ. ಅಲ್ಲದೆ ಈ ಗೆಲುವು ತಂಡವನ್ನು ಸೆಮಿೈನಲ್ ಸನಿಹಕ್ಕೂ ಕೊಂಡೊಯ್ಯಲಿದೆ.
ಟೀಮ್ ನ್ಯೂಸ್:
ಭಾರತ: ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಕಿವೀಸ್ ವಿರುದ್ಧ ಆಡುವ 11ರ ಬಳಗದ ಸಮತೋಲನಕ್ಕಾಗಿ ಭಾರತ ತಂಡ ಕಷ್ಟ ಪಡಲಿದೆ. ಹಾರ್ದಿಕ್ ಸ್ಥಾನ ತುಂಬಬಲ್ಲ ವೇಗದ ಬೌಲಿಂಗ್ ಆಲ್ರೌಂಡರ್ ತಂಡದಲ್ಲಿ ಬೇರೆ ಯಾರೂ ಇಲ್ಲ. ಮತ್ತೊಂದೆಡೆ 3ನೇ ವೇಗಿಯಾಗಿ ಶಾರ್ದೂಲ್ ಠಾಕೂರ್ ಪರಿಣಾಮಕಾರಿ ಎನಿಸುತ್ತಿಲ್ಲ. ಹೀಗಾಗಿ 3ನೇ ವೇಗಿಯಾಗಿ ಮೊಹಮದ್ ಶಮಿ ಅವರನ್ನು ಆಡಿಸಿ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವಿಭಾಗಕ್ಕೂ ಬಲ ತುಂಬಲು ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ರನ್ನು ಆಡಿಸುವ ನಿರೀಕ್ಷೆ ಇದೆ.
ನ್ಯೂಜಿಲೆಂಡ್: ಭಾರತದಂತೆ ಕಿವೀಸ್ಗೂ ಗಾಯದ ಹಿನ್ನಡೆಯೊಂದಿದೆ. ಹಾರ್ದಿಕ್ರಂತೆ ನಾಯಕ ಕೇನ್ ವಿಲಿಯಮ್ಸನ್ ಕೂಡ ಬಾಂಗ್ಲಾ ವಿರುದ್ಧದ ಪಂದ್ಯದಲ್ಲೇ ಕೈ ಹೆಬ್ಬೆರಳು ಗಾಯಕ್ಕೊಳಗಾಗಿದ್ದು, ಸೆಮೀಸ್ವರೆಗೂ ಬಹುತೇಕ ಅಲಭ್ಯರಾಗಿದ್ದಾರೆ. ಆದರೆ ಡೆವೊನ್ ಕಾನ್ವೇ, ಡೆರಿಲ್ ಮಿಚೆಲ್, ಬೆಂಗಳೂರು ಮೂಲದ ರಚಿನ್ ರವೀಂದ್ರ ಉತ್ತಮ ಾಮ್ರ್ನಲ್ಲಿರುವುದರಿಂದ ಮತ್ತು ಟಾಮ್ ಲಾಥಮ್ ಹಂಗಾಮಿ ನಾಯಕರಾಗಿ ಯಶಸ್ಸು ಕಂಡಿರುವುದರಿಂದ ಕೇನ್ ಗೈರು ಅಷ್ಟಾಗಿ ಕಾಡದು.
ಏಕದಿನ ಮುಖಾಮುಖಿ: 116
ಭಾರತ: 58
ನ್ಯೂಜಿಲೆಂಡ್: 50
ಟೈ: 1, ರದ್ದು: 7
ವಿಶ್ವಕಪ್ ಮುಖಾಮುಖಿ: 9
ಭಾರತ: 3
ನ್ಯೂಜಿಲೆಂಡ್: 5
ರದ್ದು: 1
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್