

ಕೊಚ್ಚಿ: ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಸಂಜು ಸ್ಯಾಮ್ಸನ್ (Sanju Samson) ಪ್ರಸ್ತುತ ಚಾಲ್ತಿಯಲ್ಲಿರುವ ಹೆಸರು ಎಂದರೆ ತಪ್ಪಾಗಲಾರದು. 2024ರಲ್ಲಿ ಬ್ಯಾಕ್ ಟು ಬ್ಯಾಕ್ ಶತಕಗಳನ್ನು ಬಾರಿಸುವ ಮೂಲಕ ಹೊಸ ದಾಖಲೆಯನ್ನ ಬರೆದಿದ್ದ ಸಂಜು ಅವರ ತಂದೆ ಮಾಡುವ ಗಂಭೀರ ಆರೋಪಗಳಿಂದಲೂ ಆಗಿಂದಾಗೆ ಸದ್ದು ಮಾಡುತ್ತಿರುತ್ತಾರೆ. ಸಂಜು ಸ್ಯಾಮ್ಸನ್ (Sanju Samson) ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರು ಕೆಲ ದಿನಗಳ ಹಿಂದೆ ತಮ್ಮ ಮಗನ ಬೆಳವಣಿಗೆಯನ್ನು ಸಹಿಸಲಾಗದೆ, ಉದ್ದೇಶಪೂರ್ವಕವಾಗಿ ಆತನನ್ನು ತುಳಿಯಲಾಗುತ್ತಿದೆ ಎಂದು ಕೇರಳ ಕ್ರಿಕೆಟ್ ಅಸೋಸಿಯೇಷನ್ (KCA) ವಿರುದ್ಧ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದರು. ಇದೀಗ ರಾಹುಲ್ ದ್ರಾವಿಡ್ (Rahul Dravid) ಕುರಿತಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸ್ಯಾಮ್ಸನ್ ವಿಶ್ವನಾಥ್, ಕೆಸಿಎ ನನ್ನ ಮಗನ ಜೀವನವನ್ನು ಹಾಳು ಮಾಡಲು ಯತ್ನಿಸಿದಾಗ ರಾಹುಲ್ ದ್ರಾವಿಡ್ (Rahul Dravid) ಮಧ್ಯಪ್ರವೇಶಿಸಿದರು. ಸಂಜು ಇಂದು ಭಾರತ ತಂಡದಲ್ಲಿ ಆಡುತ್ತಿದ್ದಾನೆ ಎಂದರೆ ಆತ ಸದಾ ರಾಹುಲ್ ದ್ರಾವಿಡ್ ಅವರಿಗೆ ಋಣಿಯಾಗಿರುತ್ತಾನೆ. ಆತನ ವಿರುದ್ಧ ಕ್ರಮ ಜರುಗಿಸಿದಾಗ ರಾಹುಲ್ ಅವರು ನಮ್ಮ ಪರ ನಿಂತು ಬೆಂಬಲಿಸಿದರು.
ರಾಹುಲ್ ದ್ರಾವಿಡ್ (Rahul Dravid) ಅವರು ಅಂದು ಕರೆ ಮಾಡಿ ಆತನಿಗೆ ಧೈರ್ಯ ತುಂಬಿದ ಫಲವೇ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಅವರು ನಿನ್ನ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಹೀಗಾಗಿ ನಿನಗೆ ಈ ರೀತಿ ಮಾಡುತ್ತಿದ್ದಾರೆ. ನೀನು ಧೃತಿಗೆಡಬೇಡ ಎಂದು ದೈರ್ಯ ತುಂಬಿದರು. ಅವರು ನಮಗೆ ಬೆಂಬಲವಾಗಿ ನಿಂತ ರೀತಿಯನ್ನು ನೋಡಿದರೆ ನಾವು ಎಂದಿಗೂ ಅದನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ಧಾರೆ.
ಕೇರಳ ಮೂಲದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ (Sanju Samson) ಇತ್ತೀಚೆಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮೂರು ಶತಕಗಳನ್ನು ಗಳಿಸಿದ್ದಾರೆ. ಹೀಗಾಗಿ ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಆಟಗಾರರು ಕೂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ತಂಡದಲ್ಲಿ ಸಂಜು ಸ್ಥಾನ ಪಡೆಯುವುದು ಖಚಿತ ಎಂದು ನಂಬಿದ್ದರು. ಆದರೆ, ಎಲ್ಲರ ನಂಬಿಕೆ ಹುಸಿಯಾಗಿದೆ. ಸಂಜುಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಅಲ್ಲದೇ, ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸಂಜು ಆಡದಿರುವುದು ಕೂಡ ಅವರನ್ನು ಆಯ್ಕೆ ಮಾಡದಿರಲು ಕಾರಣ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.
ಅಂದಹಾಗೆ ವಿಶ್ವನಾಥ್ ಅವರು ಈ ಹಿಂದೆಯೂ ಗಂಭೀರ ಹೇಳಿಕೆಗಳನ್ನು ನೀಡಿದ್ದರು. ನಾಯಕರಾದ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ತಮ್ಮ ಮಗನ ವೃತ್ತಿಜೀವನವನ್ನು ಹಾಳುಮಾಡಿದರು ಮತ್ತು ಹತ್ತು ವರ್ಷಗಳ ಸಮಯವನ್ನು ವ್ಯರ್ಥ ಮಾಡಿದರು ಎಂದು ಆರೋಪಿಸಿದ್ದರು. ಪ್ರಸ್ತುತ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಮಗನಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ಸಂಜು ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ.