

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತಕ್ಕೆ ಹಲವು ಪ್ಲಸ್ ಪಾಯಿಂಟ್ಗಳು ಸಿಕ್ಕಿವೆ. ಸರಣಿ ಗೆಲುವು ಸಾಧಿಸಿದ್ದಲ್ಲದೆ, ಎಲ್ಲ ಆಟಗಾರರು ಮಿಂಚಿದ್ದರಿಂದ ತಂಡದ ಆಡಳಿತ ಮಂಡಳಿ ತುಂಬಾ ಖುಷಿಯಾಗಿದೆ. ಯಶಸ್ವಿ ಜೈಸ್ವಾಲ್, ನಾಯಕ ಸೂರ್ಯಕುಮಾರ್ ಯಾದವ್ ಜೊತೆಗೆ ರಿಷಬ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಬ್ಯಾಟಿಂಗ್ನಿಂದ ಮೋಡಿ ಮಾಡುತ್ತಿದ್ದಾರೆ. ಅಲ್ಲದೆ, ಪಾಂಡ್ಯ ಬೌಲಿಂಗ್ನಲ್ಲೂ ಧೂಳೆಬ್ಬಿಸುತ್ತಿದ್ದಾರೆ. ಇವರೊಂದಿಗೆ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಕೂಡ ಬೌಲಿಂಗ್‌ನಲ್ಲಿ ಉತ್ತಮ ಸಾಥ್ ನೀಡುತ್ತಿದ್ದಾರೆ. ವೇಗಿಗಳ ಪೈಕಿ ಅರ್ಷದೀಪ್ ಸಿಂಗ್ ಅಗತ್ಯ ಸಮಯದಲ್ಲಿ ಉತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ಹಲವು ಆಟಗಾರರು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡುತ್ತಿರುವುದರಿಂದ ಭಾರತ ಗೆಲುವಿನ ಹಾದಿಯಲ್ಲಿದೆ. ಆದರೆ, ಇವರೆಲ್ಲರ ನಡುವೆ ಒಬ್ಬ ಆಟಗಾರ ಮಾತ್ರ ತುಂಬಾ ನಿರಾಸೆ ಮೂಡಿಸಿದ್ದಾರೆ.
ಬ್ಯಾಟರ್ ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲ ಎಂಬ ಟೀಕೆಗಳ ನಡುವೆಯೇ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದರು. ಉಪನಾಯಕ ಶುಭಮನ್ ಗಿಲ್ ಅವರನ್ನು ಆ ಪಂದ್ಯದಲ್ಲಿ ಕೈಬಿಡಲಾಗಿತ್ತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳದ ಸ್ಯಾಮ್ಸನ್, ಮೊದಲ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಒಳ್ಳೆಯ ಅವಕಾಶ ಕೈಚೆಲ್ಲಿದ್ದರಿಂದ ಸ್ಯಾಮ್ಸನ್ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನು ಎಲ್ಲ ಸ್ಥಾನಗಳಿಗೂ ಸೂಕ್ತ ಆಟಗಾರರಿದ್ದು, ಎಲ್ಲರೂ ಫಾರ್ಮ್ ನಲ್ಲಿರುವುದರಿಂದ ಸಂಜು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎನ್ನಲಾಗುತ್ತಿದೆ. ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ಇರ್ಫಾನ್ ಪಠಾಣ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊಸ ಹುಡುಗ ರಿಯಾನ್ ಪರಾಗ್, ಸಂಜು ಸ್ಯಾಮ್ಸನ್ಗಿಂತ ಹೆಚ್ಚು ಅವಕಾಶಗಳನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ರಿಯಾನ್ ಪರಾಗ್ ಅವರು ತಂಡದಲ್ಲಿ ಸಂಜು ಬದಲಿಗೆ ಸ್ಥಾನ ಪಡೆಯುವುದು ಖಚಿತವಾಗಿದೆ. ಅವರು ಬ್ಯಾಟ್‌ನೊಂದಿಗೆ ರನ್‌ಗಳನ್ನು ಪೂರೈಸುವ ಜೊತೆಗೆ ಚೆಂಡಿನ ಮೂಲಕ ವಿಕೆಟ್ಗಳನ್ನು ತಂದುಕೊಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಪರಾಗ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಅವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಸಿಗಲಿವೆ. ಅವರಂತೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಆಟಗಾರರು ನಮ್ಮ ದೇಶದಲ್ಲಿ ಬಹಳ ವಿರಳ. ಇದು ಪರಾಗ್‌ಗೆ ಹೆಚ್ಚುವರಿ ಶಕ್ತಿಯಾಗಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದರೆ ಭವಿಷ್ಯದಲ್ಲಿ ಟೀಮ್ ಇಂಡಿಯಾಕ್ಕೆ ಒಳ್ಳೆಯ ಆಟಗಾರನಾಗಬಹುದು ಎಂದು ಪಠಾಣ್ ಹೇಳಿದ್ದಾರೆ.
ಇನ್ನು ಲಂಕಾ ಸರಣಿಯಲ್ಲಿ ರಿಯಾನ್ ಪರಾಗ್, ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರದಿದ್ದರೂ, ಬೌಲಿಂಗ್‌ನಲ್ಲಿ ಪ್ರಭಾವ ಬೀರಿದರು. ತಮ್ಮ ಆಫ್ ಸ್ಪಿನ್ ಎಸೆತಗಳಿಂದ ಬ್ಯಾಟರ್‌ಗಳನ್ನು ಕಾಡಿದರು. ಮೊದಲ ಟಿ20 ಪಂದ್ಯದಲ್ಲಿ 7 ಎಸೆತಗಳಲ್ಲಿ 3 ವಿಕೆಟ್ ಕಬಳಿಸಿದ್ದರು. ಅವರ ಎಸೆತಗಳು ಸಾಮಾನ್ಯ ಸ್ಪಿನ್ನರ್‌ಗಳಿಗಿಂತ ಹೆಚ್ಚು ಸ್ಪಿನ್ ಆಗಿದ್ದು ಇಲ್ಲಿ ಗಮನಾರ್ಹ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಜುಗೆ ಅವಕಾಶಗಳು ತುಂಬಾ ವಿರಳವಾಗಬಹುದು. (ಏಜೆನ್ಸೀಸ್)