ಸೂರ್ಯಕುಮಾರ್ ಮಾತಿಗೂ ಕ್ಯಾರೆ ಎನ್ನದೆ ಮತ್ತೆ ಅದನ್ನೇ ರಿಪೀಟ್​ ಮಾಡಿದ ಯಶಸ್ವಿ ಜೈಸ್ವಾಲ್​!

Suryakumar Jaiswal
Published on

ನವದೆಹಲಿ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಟೀಮ್​ ಇಂಡಿಯಾ ವಶಪಡಿಸಿಕೊಂಡಿದೆ. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಿನ್ನೆ (ಜುಲೈ 28) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್​ಗಳಿಸಿತು. ಲಂಕಾ ಬ್ಯಾಟ್ಸ್​ಮನ್​ಗಳ ಪೈಕಿ ಆರಂಭಿಕ ಪಥುಮ್ ನಿಸ್ಸಾಂಕ (24 ಎಸೆತಗಳಲ್ಲಿ 32 ರನ್​) ಮತ್ತು ಕುಶಾಲ್ ಪೆರೇರಾ (34 ಎಸೆತಗಳಲ್ಲಿ 53 ರನ್​) ಮಿಂಚಿದರು. ಇತರ ಬ್ಯಾಟ್ಸ್​ಮನ್​ಗಳು ವಿಫಲವಾದ ಕಾರಣ ದೊಡ್ಡ ಸ್ಕೋರ್ ಮಾಡಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆದರೆ, ಸ್ಪಿನ್ನರ್ ರವಿ ಬಿಷ್ಣೋಯ್ 3 ವಿಕೆಟ್ ಕಿತ್ತು ಲಂಕಾ ಪಡೆಗೆ ಮುಳ್ಳಾದರು.

ಲಂಕಾ ನೀಡಿದ ಗುರಿಯನ್ನು ಬೆನ್ನತ್ತಲು ಭಾರತ ತಂಡಕ್ಕೆ ಆರಂಭದಲ್ಲೇ ವರುಣನ ಅಡ್ಡಿಯಾಯಿತು. ಮಳೆಯಿಂದಾಗಿ ಪಂದ್ಯವನ್ನು 8 ಓವರ್‌ಗಳಿಗೆ ಕಡಿತಗೊಳಿಸಲಾಯಿತು. ಗುರಿಯನ್ನು 78ಕ್ಕೆ ನಿಗದಿಪಡಿಸಲಾಯಿತು. 9 ಎಸೆತಗಳು ಬಾಕಿ ಇರುವಾಗಲೇ ಟೀಮ್​ ಇಂಡಿಯಾ ಗುರಿಯನ್ನು ಮುಟ್ಟುವ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತು.

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (15 ಎಸೆತಗಳಲ್ಲಿ 30 ರನ್​), ನಾಯಕ ಸೂರ್ಯಕುಮಾರ್ ಯಾದವ್ (12 ಎಸೆತಗಳಲ್ಲಿ 26 ರನ್​) ಮತ್ತು ಹಾರ್ದಿಕ್ ಪಾಂಡ್ಯ (9 ಎಸೆತಗಳಲ್ಲಿ ಔಟಾಗದೆ 22 ರನ್​) ಅದ್ಭುತ ಆಟವಾಡಿದರು. ಮೂರು ವಿಕೆಟ್‌ ಪಡೆಯುವುದರೊಂದಿಗೆ ಲಂಕಾ ಬೃಹತ್ ಸ್ಕೋರ್​ಗೆ ಕಡಿವಾಣ ಹಾಕಿದ ಸ್ಪಿನ್ನರ್ ರವಿ ಬಿಷ್ಣೋಯ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನು ನಿನ್ನೆಯ ಪಂದ್ಯದಲ್ಲಿ ಭಾರತದ ಇನಿಂಗ್ಸ್ ವೇಳೆ ನಡೆದ ಘಟನೆಯೊಂದು ವೈರಲ್ ಆಗಿದೆ.

ಲಂಕಾದ ಹಿರಿಯ ಸ್ಪಿನ್ನರ್ ವನಿಂದು ಹಸರಂಗ ಟೀಮ್​ ಇಂಡಿಯಾ ಇನಿಂಗ್ಸ್‌ನ ಮೂರನೇ ಓವರ್ ಮಾಡಲು ಬಂದರು. ಈ ವೇಳೆ ಕ್ರೀಸ್​ನಲ್ಲಿದ್ದ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್​ ಮೂಲಕ ದಾಳಿ ನಡೆಸಿದರು. ಮೊದಲ ಎರಡು ಎಸೆತಗಳಲ್ಲಿ 10 ರನ್ ಗಳಿಸಿದರು. ಆದಾಗ್ಯೂ, ಮೂರನೇ ಎಸೆತವನ್ನು ಬಲವಾಗಿ ಹೊಡೆಯಲು ಹೋದರು. ಹೀಗಾಗಿ ನಾಯಕ ಸೂರ್ಯಕುಮಾರ್​, ಜೈಸ್ವಾಲ್​ಗೆ ಕ್ಲಾಸ್ ತೆಗೆದುಕೊಂಡರು. ಈ ಓವರ್‌ನಲ್ಲಿ ಬೇಕಾದ ರನ್‌ಗಳು ಈಗಾಗಲೇ ಸಿಕ್ಕಿವೆ. ಇಷ್ಟು ವೇಗ ಒಳ್ಳೆಯದಲ್ಲ, ತಾಳ್ಮೆ ಇರಲಿ ಎಂದು ಖಾರವಾಗಿ ಹೇಳಿದರು.

ಮಾತು ಕೇಳಿದವರಂತೆ ತಲೆಯಾಡಿಸಿದ ಜೈಸ್ವಾಲ್​, ಮುಂದಿನ ಎಸೆತದಲ್ಲಿ ಮತ್ತೆ ಹೊಡೆಯಲಾರಂಭಿಸಿದರು. ಈ ವೇಳೆ ಸೂರ್ಯ, ಸಾಕು ಎಂದು ಮತ್ತೊಮ್ಮೆ ಎಚ್ಚರಿಸಿದರು. ಆದರೆ, ಸೂರ್ಯಕುಮಾರ್​ ಔಟ್ ಆದ ನಂತರ ಜೈಸ್ವಾಲ್ ಮತ್ತೆ ಹಸರಂಗವನ್ನು ಟಾರ್ಗೆಟ್ ಮಾಡಿದರು. ಅವರ ಎರಡನೇ ಓವರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದರು ಮತ್ತು ರನ್ ಗಳಿಸಿದರು, ಆದರೆ ಅದೇ ಓವರ್‌ನಲ್ಲಿ ಜೈಸ್ವಾಲ್​ ಔಟಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net