

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಭರ್ಜರಿ ಜಯ ಸಾಧಿಸಿದ್ದು, ಎದುರಾಳಿ ತಂಡ ನೀಡಿದ ಗುರಿಯನ್ನು 9.4 ಓವರ್ಗಳಲ್ಲಿ ಬೆನ್ನತ್ತುವ ಮೂಲಕ ಏಕಪಕ್ಷೀಯವಾಗಿ ಪಂದ್ಯವನ್ನು ಹೈದರಾಬಾದ್ ಬ್ಯಾಟ್ಸ್ಮನ್ಗಳು ಗೆಲ್ಲಿಸಿಕೊಟ್ಟರು.
ಪಂದ್ಯ ಮುಗಿದ ಬಳಿಕ ಲಖನೌ ತಂಡದ ಮಾಲೀಕ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಬಳಿ ಮೈದಾನದಲ್ಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ರಾಹುಲ್ ಲಖನೌ ತಂಡವನ್ನು ತೊರೆಯಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಸದ್ಯ ಕೇಳಿ ಬಂದಿರುವ ಪ್ರಕಾರ ರಾಹುಲ್ ಲಖನೌ ತಂಡದ ನಾಯಕತ್ವವನ್ನು ತೊರೆಯಲಿದ್ದಾರೆ ಎಂದು ಹೇಳಲಾಗಿದೆ.
ಐಪಿಎಲ್ನಲ್ಲಿ ಮೂರು ಆವೃತ್ತಿಗಳನ್ನು ಆಡಿರುವ ಎಲ್ಎಸ್ಜಿ ತಂಡವು 2022 ಹಾಗೂ 2023ರಲ್ಲಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಹಾಗೆ ನೋಡುವುದಾದರೆ ಆರ್ಸಿಬಿ, ಡೆಲ್ಲಿ, ಪಂಜಾಬ್ ಕಳೆದ 17 ಆವೃತ್ತಿಗಳಿಂದಲೂ ಐಪಿಎಲ್ ಆಡುತ್ತಿದ್ದು, ಈ ತಂಡಗಳು ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ತಂಡದ ಮಾಲೀಕರು ಒಮ್ಮೆಯೂ ನಾಯಕನ ಬಳಿ ಬಹಿರಂಗವಾಗಿ ಹೀಗೆ ನಡೆದುಕೊಂಡಿಲ್ಲ. ಇತ್ತ ಸಂಜೀವ್ ಗೋಯೆಂಕಾ ನಡೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸಂಜೀವ್ ಗೋಯೆಂಕಾ ಕ್ರೀಡಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಇದೇ ಮೊದಲೇನಲ್ಲ. 2016-17ರಲ್ಲಿ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ತಂಡದ ಮಾಲೀಕರಾಗಿದ್ದ ಸಂಜೀವ್ ಅವರು ಎಂ.ಎಸ್. ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸುವ ಮೂಲಕ ಸುದ್ದಿಯಾಗಿದ್ದರು. 2016ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ ಆರ್ಪಿಎಸ್ ತಂಡವು ಎಂಎಸ್ ಧೋನಿಯನ್ನು ನಾಯಕರನ್ನಾಗಿ ಮಾಡಿತ್ತು. ಆದರೆ ಧೋನಿ ನಾಯಕತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. 2017ರಲ್ಲಿ ಧೋನಿಯನ್ನು ಏಕಾಏಕಿ ನಾಯಕತ್ವದಿಂದ ಕೆಳಗಿಳಿಸಿ ಸ್ಟೀವ್ ಸ್ಮಿತ್ರನ್ನು ನಾಯಕರನ್ನಾಗಿ ನೇಮಿಸಿದ್ದರು. ಇದಾದ ನಂತರ ತಂಡ ಫೈನಲ್ ಪ್ರವೇಶಿತ್ತು ಆದರೆ, ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಲೀಗ್ ಹಂತದಲ್ಲಿ ಉಳಿದಿರುವ ಎರಡು ಪಂದ್ಯಗಳ ನಾಯಕತ್ವದಿಂದ ರಾಹುಲ್ ಕೆಳಗಿಳಿಯುವ ಸಾಧ್ಯತೆಗಳಿವೆ. ಆ ನಂತರ ತಂಡದಿಂದಲೂ ಹೊರನಡೆಯುತ್ತಾರೆ ಎಂಬ ಸುದ್ದಿ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಘಟನೆ ಯಾವ ಹಂತ ತಲುಪಲಿದೆ ಎಂದು ಕಾದು ನೋಡಬೇಕಿದೆ.