

ಕೊಲ್ಕತಾ: ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಸಂಜಯ್ ರಾಯ್‌ಗೆ ಸೆಷನ್ಸ್ ನ್ಯಾಯಾಲಯವು ಇಂದು ಅಂದರೆ ಸೋಮವಾರ(ಜನವರಿ 20) ಜೀವಾವಧಿ ಶಿಕ್ಷೆ ವಿಧಿಸಿದೆ. (RG Kar Case Verdict)
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಪ್ರಸ್ತುತಪಡಿಸಿದ ಸಾಕ್ಷ್ಯಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಪ್ರತಿವಾದ ವಾದಗಳನ್ನು ಆಲಿಸಿದ ನಂತರ ಸಂಜಯ್ ರಾಯ್ ಅವರನ್ನು ದೋಷಿ ಎಂದು ಘೋಷಿಸಿದ್ದರು. ಇಂದು ಈ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.
ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸುವ ಮುನ್ನ ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಸಂಜಯ್ ರಾಯ್ ಅವರಿಗೆ, ನಿಮ್ಮ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿದೆ ಎಂದು ನಾನು ಈಗಾಗಲೇ ಹೇಳಿದ್ದೆ. ಆದ್ದರಿಂದ ನ್ಯಾಯಾಲಯವು ಇಂದು ನಿಮಗೆ ಶಿಕ್ಷೆ ವಿಧಿಸಲಿದೆ ಎಂದು ಹೇಳಿದರು.
ಆಗ ಸಂಜಯ್ ರಾಯ್ ನ್ಯಾಯಾಧೀಶರಿಗೆ, ನನ್ನನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನು ಅಪರಾಧ ಮಾಡಿಲ್ಲ, ನಾನು ಯಾವಾಗಲೂ ರುದ್ರಾಕ್ಷಿಯ ಜಪಮಾಲೆಯನ್ನು ಧರಿಸುತ್ತೇನೆ. ನಾನು ಅಪರಾಧ ಮಾಡಿದ್ದರೆ ಅಪರಾಧದ ಘರ್ಷಣೆಯಲ್ಲಿ ನನ್ನ ಜಪಮಾಲೆ ಒಡೆಯುತ್ತಿತ್ತು, ಆದರೆ ಇದು ಸಂಭವಿಸಲಿಲ್ಲ. ವಿಚಾರಣೆ ಮತ್ತು ತನಿಖೆಯ ಸಮಯದಲ್ಲಿ ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಪೊಲೀಸರು ಹಲವು ಪೇಪರ್‌ಗಳಲ್ಲಿ ಬಲವಂತವಾಗಿ ಸಹಿ ಪಡೆದಿದ್ದಾರೆ ಎಂದು ಸಂಜಯ್ ರಾಯ್ ಹೇಳಿದ್ದಾರೆ.
ಇದಕ್ಕೂ ಮೊದಲು ಸಿಬಿಐ ವಕೀಲರು ಈ ಘೋರ ಅಪರಾಧಕ್ಕಾಗಿ ಆರೋಪಿಗೆ ಮರಣದಂಡನೆ ವಿಧಿಸಲು ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಸಂಜಯ್ ರಾಯ್ ಪರ ವಕೀಲರು ತಮ್ಮ ವಾದದಲ್ಲಿ, ಅಪರಾಧಿಗೆ ಮರಣದಂಡನೆಯ ಬದಲು ಬೇರೆ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದರು. ಇದು ಅಪರೂಪದ ಪ್ರಕರಣವಾಗಿದ್ದರೂ ಸುಧಾರಣೆಗೆ ಅವಕಾಶವಿರಬೇಕು. ಅಪರಾಧಿಯು ಸುಧಾರಣೆ ಅಥವಾ ಪುನರ್ವಸತಿಗೆ ಏಕೆ ಅರ್ಹನಲ್ಲ ಎಂಬುದನ್ನು ನ್ಯಾಯಾಲಯವು ತೋರಿಸಬೇಕಾಗಿದೆ. ಸರ್ಕಾರಿ ವಕೀಲರು ಸಾಕ್ಷ್ಯವನ್ನು ಪ್ರಸ್ತುತಪಡಿಸಬೇಕು ಮತ್ತು ವ್ಯಕ್ತಿಯು ಸುಧಾರಣೆಗೆ ಅರ್ಹನಲ್ಲ ಮತ್ತು ಸಮಾಜದಿಂದ ಸಂಪೂರ್ಣವಾಗಿ ಹೊರಹಾಕಬೇಕು ಎಂಬ ಕಾರಣವನ್ನು ನೀಡಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಇದು ಅಪರೂಪದ ಪ್ರಕರಣ ಆದ್ದರಿಂದ ಅಪರಾಧಿಗೆ ಮರಣದಂಡನೆ ವಿಧಿಸಲುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಇದು ಅಪರೂಪದ ಪ್ರಕರಣವಲ್ಲ ಎಂದು ಪರಿಗಣಿಸಿದ ನ್ಯಾಯಾಲಯವು ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಾಧೀಶರಾದ ಅನಿರ್ಬನ್ ದಾಸ್ ಅವರು ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದರು. ಮೃತ ಟ್ರೈನಿ ವೈದ್ಯರ ಕುಟುಂಬಕ್ಕೆ 17 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿದೆ. ಸಂತ್ರಸ್ತೆ ಎರಡನೇ ವರ್ಷದ ಟ್ರೈನಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ಆಸ್ಪತ್ರೆಯಲ್ಲಿ ಟ್ರೈನಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. (ಏಜೆನ್ಸೀಸ್)