Aadi Saikumar - ಕನ್ನಡಕ್ಕೆ ಸಾಯಿಕುಮಾರ್​ ಪುತ್ರನ ಎಂಟ್ರಿ

ಹಿರಿಯ ನಟ ಸಾಯಿಕುಮಾರ್​ ಪುತ್ರ ಆದಿ ತೆಲುಗಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ "ಪ್ರೇಮ ಕಾವಾಲಿ', "ಲವ್ಲಿ', "ಶಂಭಾಲ', "ಸಿಎಸ್​ಐ ಸನಾತನ್​', "ಎಸ್​ಐ ಯುಗಂಧರ್​' ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಅವರನ್ನು "ವೈರ', "ದಮಯಂತಿ' ಖ್ಯಾತಿಯ ಕನ್ನಡ ನಿರ್ದೇಶಕ ನವರಸನ್​ ಕನ್ನಡದಲ್ಲಿ ಪರಿಚಯಿಸುತ್ತಿದ್ದಾರೆ.
ನವರಸನ್, ಆದಿ, ಸಾಯಿಕುಮಾರ್
ನವರಸನ್, ಆದಿ, ಸಾಯಿಕುಮಾರ್
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹಿರಿಯ ನಟ ಸಾಯಿಕುಮಾರ್​ ಪುತ್ರ ಆದಿ ತೆಲುಗಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ "ಪ್ರೇಮ ಕಾವಾಲಿ', "ಲವ್ಲಿ', "ಶಂಭಾಲ', "ಸಿಎಸ್​ಐ ಸನಾತನ್​', "ಎಸ್​ಐ ಯುಗಂಧರ್​' ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇದೀಗ ಅವರನ್ನು "ವೈರ', "ದಮಯಂತಿ' ಖ್ಯಾತಿಯ ಕನ್ನಡ ನಿರ್ದೇಶಕ ನವರಸನ್​ ಕನ್ನಡದಲ್ಲಿ ಪರಿಚಯಿಸುತ್ತಿದ್ದಾರೆ. ಹೌದು, ಇತ್ತೀಚೆಗಷ್ಟೆ ನವರಸನ್​ ಮತ್ತು ಆದಿ ಸಾಯಿಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ನವರಸನ್​, "ಇದು ದೊಡ್ಡ ಸ್ಕೇಲ್​ನಲ್ಲಿ ಮೂಡಿಬರಲಿರುವ ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಡಬ್​ ಮಾಡಲಿದ್ದೇವೆ. ನಾಯಕನ ಪಾತ್ರಕ್ಕೆ ಆದಿ ಹೊಂದುತ್ತಾರೆ ಅಂತನ್ನಿಸಿ, ಅವರಿಗೆ ಕಥೆ ಹೇಳಿದೆವು. ಅವರು ಖುಷಿಯಿಂದ ಒಪ್ಪಿಕೊಂಡರು. ಚಿತ್ತೂರು ಹಿನ್ನೆಲೆಯಲ್ಲಿ ನಡೆಯುವ ಕಥೆಯಿದು. 140 ದಿನಗಳ ಕಾಲ ಒಂದೇ ಹಂತದಲ್ಲಿ ಹೈದರಾಬಾದ್​, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವೆಡೆ ಶೂಟಿಂಗ್​ ನಡೆಸಲು ಪ್ಲ್ಯಾನ್​​ ಮಾಡಿಕೊಂಡಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ. ಇದೇ ಅ. 20ರಂದು ಚಿತ್ರದ ಫಸ್ಟ್​ ಲುಕ್​ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು. "ದಂಡುಪಾಳ್ಯ' ಮತ್ತು "ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳ ನಿರ್ಮಾಪಕ ಪ್ರಶಾಂತ್​ ರುದ್ರಪ್ಪ, ತ್ರಿಶೂಲ್​ ಎಂಟರ್​ಟೇನ್ಮೆಂಟ್​ ಬ್ಯಾನರ್​ನಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಅಜನೀಷ್​ ಲೋಕನಾಥ್​ ಸಂಗೀತವಿರಲಿದೆ.

ಪೋಸ್ಟರ್
ಪೋಸ್ಟರ್

ಆಧ್ಯಾತ್ಮದ ಸುತ್ತ ಕುತೂಹಲಭರಿತ ಕಥೆ

"ಇದು ದೈವಿಕ ರಹಸ್ಯ ಮತ್ತು ಸಸ್ಪೆನ್ಸ್​ ಕಥೆ' ಎನ್ನುವ ನವರಸನ್​, "ಆಧ್ಯಾತ್ಮಿಕ ನಂಬಿಕೆಗಳು, ದೈವಿಕ ಶಕ್ತಿಗಳು ಹಾಗೂ ನಿಗೂಢ ಸಂಗತಿಗಳ ಸುತ್ತ ಸಾಗುತ್ತದೆ. ಪ್ರೇಕ್ಷಕರಿಗೆ ವಿಭಿನ್ನ ಸಿನಿಮೀಯ ಅನುಭವ ನೀಡುವ ಚಿತ್ರವಿದು. ಆದಿ ವೃತ್ತೀಜಿವನದಲ್ಲಿ ಇದು ಮತ್ತೊಂದು ವಿಭಿನ್ನ ಪ್ರಯತ್ನವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಶೀರ್ಷಿಕೆ, ತಾರಾಗಣ ಮತ್ತು ತಂತ್ರಜ್ಞರ ಮಾಹಿತಿ ನೀಡಲಿದ್ದೇವೆ' ಎಂದು ಹೇಳಿಕೊಳ್ಳುತ್ತಾರೆ.

ನವರಸನ್​, ಆದಿ ಮತ್ತು ಪ್ರಶಾಂತ್ ರುದ್ರಪ್ಪ
ನವರಸನ್​, ಆದಿ ಮತ್ತು ಪ್ರಶಾಂತ್ ರುದ್ರಪ್ಪ

ಕಳೆದ ಆರು ತಿಂಗಳಿನಿಂದ ಪ್ರಿ-ಪ್ರೊಡಕ್ಷನ್​ ಜತೆಗೆ ಸಿಜಿ (ಕಂಪ್ಯೂಟರ್​ ಗ್ರಾಫಿಕ್ಸ್​) ಕೆಲಸಗಳನ್ನೂ ಬಹುತೇಕ ಪೂರ್ಣಗೊಳಿಸಿದ್ದೇವೆ. 2027ರ ಜನವರಿಯಿಂದ ಶೂಟಿಂಗ್​ ಪ್ರಾರಂಭಿಸಿ, ಮೇ ಒಳಗೆ ಪೂರ್ಣಗೊಳಿಸಲಿದ್ದೇವೆ. ಮುಂದಿನ ಆಗಸ್ಟ್​ ಅಥವಾ ದಸರಾ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್​​ ಇದೆ.

ನವರಸನ್​, ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net