

ಬೆಂಗಳೂರು : ಕನ್ನಡದ ‘ಕೋಟಿ’, ‘ಮೋಡ ಕವಿದ ವಾತಾವರಣ’ ನಟಿ ಮೋಕ್ಷಾ ಕುಶಾಲ್ ಮನೆಯಲ್ಲಿ ಕೂರ್ಗ್ ಸಂಪ್ರದಾಯದಂತೆ ನವರಾತ್ರಿ ಆಚರಣೆ ಮಾಡಲಾಗುತ್ತದೆ. ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ, ಮಾಡಿ ಭಕ್ತಿ ಮೆರೆಯುತ್ತಾರೆ. ಇನ್ನು ಈ ಬಾರಿ ಹಬ್ಬದ ದಿನದಂದೇ ಮೋಕ್ಷಾ ಕೆಲಸದ ನಿಮಿತ್ತ ವಿದೇಶ ಪ್ರವಾಸಕ್ಕೆ ತೆರಳಲಿದ್ದಾರೆ.
ಅದರ ಮಧ್ಯೆಯೂ ಹಬ್ಬದ ಆಚರಣೆಯ ಬಗ್ಗೆ, ‘ಬೆಂಗಳೂರಿನ ಮನೆಯಲ್ಲಿ ಹಬ್ಬ ಆಚರಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಕೊಡವ ಸಂಪ್ರದಾಯದಂತೆ ದಸರಾ ಆಚರಣೆ ಸರಳವಾಗಿರುತ್ತದೆ. ಈ ಬಾರಿ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುತ್ತಿದ್ದೇನೆ. ಹಬ್ಬ ಆರಂಭವಾದ ದಿನದಿಂದಲೂ ಮನೆಯಲ್ಲಿ ಪೂಜೆ ಮಾಡಿದ ಬಳಿಕ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತೇವೆ. ಹೊಸ ಬಟ್ಟೆ ಖರೀದಿಸುತ್ತೇವೆ. ಹಾಗೆಯೇ, ಮನೆಯಲ್ಲಿ ವಿಧ ವಿಧವಾದ ಸಿಹಿ ಖಾದ್ಯಗಳನ್ನು ಮಾಡುತ್ತೇವೆ. ಮುಖ್ಯವಾಗಿ ಫ್ರೆಂಡ್ಸ್ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಅವರ ಮನೆಗೆ ತೆರಳಿ, ಗೊಂಬೆಗಳನ್ನು ವೀಕ್ಷಿಸುತ್ತೇವೆ. ನಮ್ಮೂರು ಮಡಿಕೇರಿಯ ದಸರಾ ವಿಶೇಷ. ಆದರೆ, ಈವರೆಗೂ ನೋಡುವ ಅವಕಾಶ ಸಿಕ್ಕಿಲ್ಲ. ಮುಂದಿನ ಬಾರಿಯಾದರೂ ಮಡಿಕೇರಿ ದಸರಾ ನೋಡಬೇಕು ಎಂದುಕೊಂಡಿದ್ದೇನೆ. ಚಿಕ್ಕವಳಿದ್ದಾಗ ಮೈಸೂರು ದಸರಾ ನೋಡಿದ್ದೆ. ನವರಾತ್ರಿ ಹಬ್ಬ ಎಂದರೆ ಪಾಸಿಟಿವ್ ಎನರ್ಜಿ. ದುರ್ಗಾದೇವಿ ಹೇಗೆ ರಾಕ್ಷಸರನ್ನು ಸಂಹಾರ ಮಾಡಿದಳೋ ಹಾಗೆಯೇ ನಾವು ಕೂಡ ನಮ್ಮಲ್ಲಿ ಬೇರೂರಿರುವ ನಕಾರಾತ್ಮಕ ಚಿಂತನೆಗಳನ್ನು ಹೊರಗೆ ಹಾಕಲು ಹಾಗೂ ಅದರ ವಿರುದ್ಧ ಹೋರಾಡಲು ಹಬ್ಬ ಸಹಕಾರಿಯಾಗುತ್ತದೆ. ಹಬ್ಬದಲ್ಲಿ ಹಚ್ಚುವ ಪ್ರತಿ ದೀಪವೂ ನಮ್ಮಲ್ಲಿ ಜ್ಞಾನ, ಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ-ನಷ್ಟ ಬಂದರೂ, ಎದೆಗುಂದದೆ ಹೋರಾಡಿ ಬದುಕು ಕಟ್ಟಿಕೊಳ್ಳಬೇಕು. ಅದು ಈ ದಸರಾ ಹಬ್ಬದಿಂದಲೇ ಆಗಲಿ ಎಂಬುದು ನನ್ನ ನಂಬಿಕೆ. ಆರೋಗ್ಯದ ಜತೆಗೆ ನಾನಂದುಕೊಂಡ ಎಲ್ಲ ಕೆಲಸಗಳು ಶೀಘ್ರ ನೆರವೇರಲಿ ಎಂಬುದೇ ದೇವಿಯಲ್ಲಿ ಪ್ರಾರ್ಥನೆ. ‘ಮೋಡ ಕವಿದ ವಾತಾವರಣ’ ಬಳಿಕ ಹಲವು ಕಥೆಗಳನ್ನು ಕೇಳಿದ್ದೇನೆ. ಪೌರಾಣಿಕ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಹಲವು ವರ್ಷಗಳ ಕನಸು. ಅದಕ್ಕಾಗಿ ಅಂತಹ ಪಾತ್ರಕ್ಕಾಗಿ ಕಾಯುತ್ತಿದ್ದೇನೆ’ ಎಂದು ಮೋಕ್ಷಾ ಕುಶಾಲ್ ಹೇಳಿಕೊಳ್ಳುತ್ತಾರೆ.