

ಬೆಂಗಳೂರು: ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುತ್ತೇನೆ ಎಂದಿದ್ದ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕೇಳಿದ ಪ್ರಶ್ನೆಗಳ ರಾಶಿಯನ್ನು ಕಂಡು ಪರವಶಳಾಗಿದ್ದೇನೆ ಇದಕ್ಕೆಲ್ಲಾ ಉತ್ತರಿಸಲು ಲೈವ್ ಬಂದರೆ ಉತ್ತಮ ನಾಳೆ ಬೆಳಗ್ಗೆ ಲೈವ್ ಬರುತ್ತೇನೆ ಎಂದು ಹೇಳಿದ್ದಾರೆ.
ಇಂದು ಮಧ್ಯಾಹ್ನವಷ್ಟೇ ಟ್ವೀಟ್ ಮಾಡಿದ್ದ ರಶ್ಮಿಕಾ ಕೆಲ ದಿನಗಳ ಹಿಂದಷ್ಟೇ ನೀವೆಲ್ಲಾ ನನ್ನ ಮೂರು ವರ್ಷದ ಸಿನಿ ಜರ್ನಿಯನ್ನು ಸಂಭ್ರಮಿಸಿದ್ದೀರಿ. ಆದರೆ, ಬೇರೆಡೆ ಇದ್ದಿದ್ದರಿಂದ ನಿಮಗಾಗಿ ಏನನ್ನು ಮಾಡಲು ಸಾಧ್ಯವಾಗಲಿಲ್ಲ. ಆದರೀಗ ನಾನು ಮರಳಿದ್ದೇನೆ. ನಾನು ನಿಮಗಾಗಿ ಏನೋ ಒಂದನ್ನು ಹೊಂದಿದ್ದೇನೆ. ನೀವು ಏನೇ ಕೇಳಿದರೂ ನಾನು ಉತ್ತರಿಸುತ್ತೇನೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಿ ಎಂದಿದ್ದರು.
ಟ್ವೀಟ್ ಬೆನ್ನಲ್ಲೇ ಟ್ವಟರ್ನಲ್ಲಿ ಪ್ರಶ್ನೆಗಳ ಸುರಿಮಳೆ ಹರಿದುಬರುತ್ತಿದೆ. ಕೆಲವರಂತೂ ಈವರೆಗೂ ಒಂದೂ ಪ್ರಶ್ನೆಗೂ ಉತ್ತರಿಸಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನು ಮನಗಂಡಿರುವ ರಶ್ಮಿಕಾ ಇದೀಗ ಮತ್ತೊಮ್ಮೆ ಟ್ವೀಟ್ ಮಾಡಿ, ಗಯ್ಸ್, ನೀವು ಕಳುಹಿಸಿದ ಅನೇಕ ಪ್ರಶ್ನೆಗಳನ್ನು ನೋಡಿ ನಾನು ಪರವಶಳಾಗಿದ್ದೇನೆ. ಇದಕ್ಕೆಲ್ಲಾ ಉತ್ತರ ನೀಡುವ ಒಳ್ಳೆಯ ದಾರಿಯೆಂದರೆ ಅದು ಲೈವ್ ಬರುವುದು. ನೀವು ನೇರವಾಗಿ ನನಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬಹುದು. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ಟ್ವಿಟರ್ ನಿಮಗಾಗಿ ಈ ಕೆಲಸ ಮಾಡಲಿದೆ ಗಯ್ಸ್ ಎಂದು ಲೈವ್ ಬರುವುದಾಗಿ ತಿಳಿಸಿದ್ದಾರೆ.
ಮೊದಲು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಎಂದ ಅಭಿಮಾನಿಗಳು
ಮೊದಲು ಪ್ರಶ್ನೆ ಕೇಳಿ ಎಂದಿದ್ದಕ್ಕೆ ಟ್ವೀಟ್ ಮೂಲಕ ಸಾಕಷ್ಟು ಪ್ರಶ್ನೆ ಕೇಳಿದ್ದ ಅಭಿಮಾನಿಗಳು ನಾಳೆ ಲೈವ್ ಬರುವಿರಂತೆ ಮೊದಲು ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಗ್ರಹಿಸಿದ್ದಾರೆ. ಇಲ್ಲಿಯವರೆಗೆ 32 ಪ್ರಶ್ನೆ ಕೇಳಿದ್ದೇನೆ. ಒಂದಕ್ಕೂ ಉತ್ತರವಿಲ್ಲ ಎಂದು ನೆಟ್ಟಿಗರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ನಾಳೆ 11 ಗಂಟೆಗೆ ನಾನು ಬಿಜಿಯಾಗಿರುತ್ತೇನೆಂದು ಇನ್ನೊರ್ವ ನೆಟ್ಟಿಗ ಹೇಳಿದ್ದಾರೆ. ಇನ್ನು ಕೆಲವರು ನಾನು ಕಾಯುತ್ತಿರುತ್ತೇವೆ ಎಂದಿದ್ದಾರೆ.