ಬಿ.ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ಸ್ಯಾಂಡಲ್​ವುಡ್​| b-saroja-devi

saroja devi
Published on

ಬೆಂಗಳೂರು; ಬಹುಭಾಷಾ ನಟಿ ಹಾಗೂ ಹಿರಿಯ ಕಲಾವಿದೆಯಾದ ಸರೋಜಾದೇವಿ ಅವರು ನಿಧನರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲೂ ನಾಯಕಿಯಾಗಿ ಮಿಂಚಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಇನ್ನೂ ಖ್ಯಾತ ನಟಿಯ ನಿಧನಕ್ಕೆ ಇಡೀ ಸ್ಯಾಂಡಲ್​ವುಡ್​ ಕಂಬನಿ ಮಿಡಿದಿದೆ. ನಟ ದರ್ಶನ್​ ಹಾಗೂ ನಟಿ ಸುಮಲತಾ ಅಂಬರೀಶ್ ಸೇರಿದಂತೆ ಅನೇಕ ಗಣ್ಯರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಕಂಬನಿ ಮಿಡಿದಿದ್ದಾರೆ.

ನಟ ದರ್ಶನ್​

ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ ಎಂದು ನಟ ದರ್ಶನ್​ ಸಂತಾಪ ಸೂಚಿಸಿದ್ದಾರೆ.

ಸುಮಲತಾ ಅಂಬರೀಶ್

ನಮ್ಮೆಲ್ಲರ ಪ್ರೀತಿಯ “ಅಭಿನಯ ಸರಸ್ವತಿ” ಬಿ. ಸರೋಜಾದೇವಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖವಾಯಿತು. ತಮ್ಮ ಸಹಜವಾದ ಅಭಿನಯದ ಮೂಲಕ ಪಾತ್ರಗಳಿಗೆ ಜೀವ ತುಂಬುವ ಅನನ್ಯ ಕಲೆಯಿಂದ ಅವರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ನಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದ ಅವರು ಹಾಗೂ ಡಾ. ಅಂಬರೀಶ್ ಅವರ ಒಡನಾಟ, ಬಾಂಧವ್ಯ ಮತ್ತು ನಮ್ಮ ಸ್ನೇಹವು ಸುಂದರ ನೆನಪುಗಳಾಗಿ ಉಳಿಯಲಿವೆ. ತಮ್ಮ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥನೆ ಸಲ್ಲಿಸುವೆ ಓಂ ಶಾಂತಿ ಎಂದು ನಟಿ ಸುಮಲತಾ ಅಂಬರೀಶ್ ಸಂತಾಪ ಸೂಚಿಸಿದ್ದಾರೆ.

ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಸಹ ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘ಅಭಿನಯ ಸರಸ್ವತಿಗೆ ಭಾವಪೂರ್ವಕ ವಿದಾಯ. ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರೀಮತಿ ಬಿ. ಸರೋಜಾದೇವಿ ಅವರು ಇಂದು ನಮ್ಮನ್ನು ಅಗಲಿದ್ದು, ಅವರ ಅಗಲಿಕೆಯಿಂದ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೂಡ ಬಿ. ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net