

ನವದೆಹಲಿ; ಇದೇ ಜುಲೈ 16 ರಂದು ಯೆಮೆನ್‌ನಲ್ಲಿ ಗಲ್ಲಿಗೇರಿಸಲು ನಿಗದಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ತಡೆಯಲು ಕೇಂದ್ರ ಸರ್ಕಾರವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸರ್ಕಾರದ ಹಸ್ತಕ್ಷೇಪಕ್ಕೆ ಕೋರಿ ಸಲ್ಲಿಸಲಾದ ಕೊನೆಯ ಕ್ಷಣದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಈ ವಿಷಯದಲ್ಲಿ ಭಾರತವು ಹೋಗಲು ಸಾಧ್ಯವಿರುವ ದೂರ ಇಷ್ಟೇ ಮತ್ತು ಸರ್ಕಾರ ಈಗಾಗಲೇ ಆ ಮಿತಿಯನ್ನು ತಲುಪಿದೆ. ಸರ್ಕಾರವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ. ಯೆಮೆನ್‌ನ ಸೂಕ್ಷ್ಮತೆಯನ್ನು ನೋಡಿದರೆ ಅದು ರಾಜತಾಂತ್ರಿಕವಾಗಿ ಗುರುತಿಸಲ್ಪಟ್ಟಿಲ್ಲ, ಬ್ಲಡ್ ಮನಿ ವಿಚಾರ ಖಾಸಗಿ ಮಾತುಕತೆಯಾಗಿದೆ. ಸರ್ಕಾರ ಖಾಸಗಿ ಮಾರ್ಗಗಳ ಮೂಲಕ ನಿಮಿಷಾ ಅವರನ್ನು ರಕ್ಷಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ, ಭಾರತ ಸರ್ಕಾರ ಯಾವ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಒಂದು ಮಿತಿಯಿದೆ. ನಾವು ಅದನ್ನು ತಲುಪಿದ್ದೇವೆ ಎಂದು ವಕೀಲ ಎಜಿ ವೆಂಕಟರಮಣಿ ಹೇಳಿದ್ದಾರೆ.
(ಏಜೆನ್ಸೀಸ್)
ನಿಮಿಷಾ ಪ್ರಿಯಾ 2017 ರಲ್ಲಿ ತನ್ನ ಯೆಮೆನ್ ವ್ಯವಹಾರ ಪಾಲುದಾರ ತಲಾಲ್ ಅಬ್ದೋ ಮಹ್ದಿ ಅವರ ಕೊಲೆ ಆರೋಪದ ಮೇಲೆ ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ನಿಮಿಷಾ ಪ್ರಿಯಾಳ ಬಿಡುಗಡೆಗೆ ಕೋರಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ಭಾರತೀಯ ರಾಯಭಾರ ಕಚೇರಿಯನ್ನು ವಿನಂತಿಸಿದ್ದರು. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೂ ಪತ್ರ ಬರೆದಿದ್ದರು. ನಿಮಿಷಾ ಪ್ರಿಯಾಳ ಮರಣದಂಡನೆ ಜುಲೈ 16 ರಂದು ನಿಗದಿಯಾಗಿದೆ. ಮರಣದಂಡನೆಗೆ ಕೇವಲ ಮೂರು ದಿನಗಳು ಬಾಕಿ ಇರುವಾಗ ನಿಮಿಷಾ ಪ್ರಿಯಾಳ ತಾಯಿ ಪ್ರೇಮಕುಮಾರಿ ಅರ್ಜಿ ಸಲ್ಲಿಸಿದ್ದಾರೆ. ಪ್ರಿಯಾ ಅವರ ವಕೀಲರು ಮತ್ತು ಎಜಿಐ ಇಬ್ಬರ ವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 18, ಶುಕ್ರವಾರಕ್ಕೆ ನಿಗದಿಪಡಿಸಿದೆ.