ಡ್ರಗ್ಸ್​ ಕೇಸ್​​: ಐಎಸ್​ಡಿಯಿಂದ ಲೂಸ್ ಮಾದ ಯೋಗಿ, ಕ್ರಿಕೆಟರ್​ ಅಯ್ಯಪ್ಪ ಮತ್ತು ಕಿರುತೆರೆ ನಟಿಯ ವಿಚಾರಣೆ

Loose Maada
Published on

ಬೆಂಗಳೂರು: ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್​ಗೆ ಸಂಬಂಧಪಟ್ಟಂತೆ ನಟಿಯರಾದ ರಾಗಿಣಿ, ಸಂಜನಾ ಸೇರಿ ಕೆಲವು ಡ್ರಗ್ಸ್ ಪೆಡ್ಲರ್​ಗಳನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ.

ಇದೀಗ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಎಸ್​ಡಿ (ಆಂತರಿಕ ಭದ್ರತಾ ವಿಭಾಗ) ಕೂಡ ತನಿಖೆ ನಡೆಸುತ್ತಿದೆ. ಡ್ರಗ್​​ ಪೆಡ್ಲರ್​ ಓರ್ವನ ಹೇಳಿಕೆಯ ಅನ್ವಯ ಇಂದು ಲೂಸ್​ ಮಾದ ಖ್ಯಾತಿಯ ನಟ ಯೋಗಿ ಮತ್ತು ಕ್ರಿಕೆಟರ್​ ಎನ್​. ಸಿ.ಅಯ್ಯಪ್ಪ (ನಟಿ ಪ್ರೇಮಾ ಅವರ ಸೋದರ) ಹಾಗೂ ಕಿರುತೆರೆ ನಟಿ ರಷ್ಮಿತಾ ಚೆಂಗಪ್ಪ  ಅವರನ್ನು ಐಎಸ್​ಡಿ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್​ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ

ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ಇವರಿಬ್ಬರನ್ನೂ ವಿಚಾರಣೆ ಮಾಡಲಾಗಿದೆ. ಬರಿ ಇವರಿಷ್ಟೇ ಅಲ್ಲ ಡ್ರಗ್ಸ್ ಲಿಂಕ್​ಗೆ ಸಂಬಂಧಪಟ್ಟಂತೆ ಐಎಸ್​​ಡಿಯಿಂದ ಇನ್ನೂ ಹಲವು ಕಿರುತೆರೆ ನಟ-ನಟಿಯರನ್ನೂ ವಿಚಾರಣೆ ಮಾಡಲಾಗಿದೆ. ಕೆಲವರಿಗೆ ನೋಟಿಸ್ ಕೂಡ ನೀಡಲಾಗಿದೆ. ಈ ಹಿಂದೆ ವಿಚಾರಣೆ ಎದುರಿಸಿದ್ದ ನಟನೋರ್ವ ಹಲವು ಕಿರುತೆರೆ ನಟಿಯರ ಹೆಸರನ್ನೂ ಹೇಳಿದ್ದಾಗಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಎಡಿಜಿಪಿ ಭಾಸ್ಕರ್​ ರಾವ್ ಅವರು ಮಾತನಾಡಿದ್ದು, ಹಾಲಿ ಆಯುಕ್ತರ ನೇತೃತ್ವದಲ್ಲಿ ಮಾದಕ ವಸ್ತುಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಇದನ್ನು ತಡೆಯಲು ಕೇವಲ ಪೊಲೀಸರಿಂದ ಮಾತ್ರ ಸಾಧ್ಯವಿಲ್ಲ. ವ್ಯಸನಿಗಳ ಬಗ್ಗೆ ಅವರ ಸಂಬಂಧಿಕರು, ಗೊತ್ತಿದ್ದವರು ಮಾಹಿತಿ ನೀಡಬೇಕು. ಪೋಸ್ಟ್ ಆಫೀಸ್​​ನಲ್ಲಿ ಕೆಮಿಕಲ್​ ಡ್ರಗ್ಸ್​ ಪೂರೈಕೆ ಆಗುತ್ತಿರುವುದು ದೊಡ್ಡ ಸವಾಲಾಗಿದೆ. ನಮ್ಮ ಆಂತರಿಕ ಭದ್ರತಾ ವಿಭಾಗದಲ್ಲೂ ಡ್ರಗ್ಸ್​ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net