ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್​ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ

aditya alva
Published on

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟಿನ ಪ್ರಕರಣದ A6 ಆರೋಪಿ ಆದಿತ್ಯ ಆಳ್ವ, ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ನೇರವಾಗಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್​ ಮಾಫಿಯಾ ಕೇಸಿನಲ್ಲಿ ಸ್ಯಾಂಡಲ್​ವುಡ್​ನ 'ಮಾದಕ' ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್​ ಪೆಡ್ಲರ್​ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ. ಆದಿತ್ಯ ಆಳ್ವ ಮಾತ್ರ ಸಿಸಿಬಿ ಪೊಲೀಸರ ಕೈಗೆ ಸಿಗದೆ ಎಸ್ಕೇಪ್​ ಆಗಿದ್ದಾನೆ. ನಟಿಮಣಿಯರಿಬ್ಬರು ಸೇರಿ ಹಲವು ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈತ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ FIR ರದ್ದು ಮಾಡುವಂತೆ ಎಂದು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ. ಇದನ್ನೂ ಓದಿರಿ ‘ರಾಗಿಣಿಗೆ ನಾನೇ ಡ್ರಗ್ಸ್​ ಕೊಡುತ್ತಿದ್ದೆ… ಡ್ರಗ್ಸ್​ ಅಡಗಿಸಿಟ್ಟಿರುವ ಜಾಗವನ್ನೂ ತೋರಿಸುವೆ’

ಸ್ಯಾಂಡಲ್​ವುಡ್​ ಡ್ರಗ್ಸ್​ ಲಿಂಕ್ ಪ್ರಕರಣದ ಆರೋಪಿ ಆದಿತ್ಯ ಆಳ್ವ ಮಾಜಿ ಸಚಿವ ಜೀವರಾಜ್​ರ ಪುತ್ರ. ಹೆಬ್ಬಾಳ ಸಮೀಪ ನಾಲ್ಕು ಎಕರೆಗೂ ಹೆಚ್ಚಿನ ಜಾಗದಲ್ಲಿ “House of Life” ಹೆಸರಿನಲ್ಲಿ ರೆಸಾರ್ಟ್ ಹೊಂದಿರುವ ಆದಿತ್ಯ, ತಡರಾತ್ರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ವೇಳೆ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಸಿಸಿಬಿ ಪೊಲೀಸರು ಸೆ.15ರಂದು ಈ ರೆಸಾರ್ಟ್​ ಮೇಲೆ ದಾಳಿ ನಡೆಸಿದ್ದರು. ಈ ನಡುವೆ ಸದಾಶಿವನಗರದಲ್ಲಿರುವ ಆದಿತ್ಯನ ಮನೆಯನ್ನ ಶೋಧ ನಡೆಸಿದ ಸಿಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಇದೀಗ ತನ್ನ ವಿರುದ್ಧದ ಪ್ರಕರಣವನ್ನೇ ಕೈಬಿಡಿ ಎಂದು ಕೋರಿ ಹೈಕೋರ್ಟ್​ಗೆ ಸಲ್ಲಿಸಿರುವ ಆದಿತ್ಯನ ಅರ್ಜಿ ಈ ವಾರದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net