

ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟಿನ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮತ್ತೊಂದು ಸ್ಫೋಟಕ ಬಾಂಬ್ ಸಿಡಿಸಿದ್ದಾರೆ.
ಡ್ರಗ್ಸ್ ದಂಧೆಯಲ್ಲಿ ಎಂಎಲ್ಎ ಮಗ, ಡಾರ್ಕ್ವೆಬ್ ಬಳಕೆ ಮತ್ತು ಮತ್ತಿಬ್ಬರು ನಟರ ವಿಚಾರಣೆ ಸಣ್ಣ ಎಳೆಯಷ್ಟೆ ಎಂದಿರುವ ಸಂಬರಗಿ, ಮುಂದಿನ ದಿನಗಳಲ್ಲಿ ಇಬ್ಬರು ದೊಡ್ಡ ನಟರ ಸಮೇತ ಇನ್ನಷ್ಟು ಜನರ ವಿವರ ಬಹಿರಂಗ ಪಡಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಿಂಟ್ ಬಿಟ್ಟುಕೊಟ್ಟಿದ್ದಾರೆ ಸಂಬರಗಿ. ಈ ಕುರಿತು ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ಸಂಬರಗಿ, 'ನಾಳೆ-ನಾಡಿದ್ದು ಸ್ಟಾರ್ ನಟರ ಬಂಡವಾಳ ಹೊರ ಬರುತ್ತೆ. ನಾಳೆ(ಶುಕ್ರವಾರ) ಇಷ್ಟೊತ್ತಿಗೆ ಅವ್ರ ಬಳಿ ಪೊಲೀಸರು ಇರ್ತಾರೆ. ದಾಖಲೆಗಳ ಸಮೇತ ನಾನೇ ನಾಳೆ ಕಂಪ್ಲೀಟ್ ಡೀಟೇಲ್ಸ್ ಹೇಳ್ತೀನಿ' ಎಂದು ಹೇಳಿದ್ದಾರೆ.
ಡ್ರಗ್ಸ್ ಕೇಸ್ನಲ್ಲಿ ಸ್ಯಾಂಡಲ್ವುಡ್ನ ಕೆಲ ನಟ-ನಟಿಯರು ಭಾಗಿಯಾಗಿದ್ದಾರೆ ಎಂದು ಆರಂಭದಿಂದಲೂ ಆರೋಪಿಸುತ್ತಿರುವ ಸಂಬರಗಿ, ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಜನಾ ಗಲ್ರಾನಿ ಅಲಿಯಾಸ್ ಮಹಿರಾ ಸಂಪರ್ಕ ಇದ್ದ ಬಗ್ಗೆ ಸಾಕಷ್ಟು ಫೋಟೋಗಳನ್ನು ಬಹಿರಂಗ ಪಡಿಸಿದ್ದರು. ಅಲ್ಲದೆ ಶಾಸಕ ಜಮೀರ್ ಅಹ್ಮದ್ರ ಆಪ್ತ ಶೇಖ್ ಫಾಝಿಲ್ನ ಕ್ಯಾಸಿನೋ ಪಾರ್ಟಿ ಬಗ್ಗೆಯೂ ಪ್ರಸ್ತಾಪಿಸಿದ್ದರು. ಹಾಗಾಗ್ಗೆ ಹೊಸ ಹೊಸ ಬಾಂಬ್ ಸಿಡಿಸುತ್ತಿರುವ ಸಂಬರಗಿ, ಇದೀಗ ಡಾರ್ಕ್ ವೆಬ್ ದಂಧೆಯಲ್ಲಿ ಸ್ಟಾರ್ ನಟರಿಬ್ಬರ ಬಣ್ಣ ಬಯಲು ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ 'ಎ' ಗ್ರೇಡ್ ಸ್ಟಾರ್ಸ್ ಬೇಟೆಗೆ ಸಿಸಿಬಿ ಸಜ್ಜಾಗಿದೆ ಎಂದು ಎಚ್ಚರಿಸಿದ್ದಾರೆ.