ಮರಳಿನಲ್ಲಿ ಮೂಡಿತು ಜಿ-20 ಶೃಂಗಸಭೆಯ ವಿಶ್ವದ ಅತಿ ದೊಡ್ಡ ಲೋಗೋ

G 2O sand art
Published on

ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಗೆ ವಿಶ್ವದ ನಾಯಕರು ಬಂದಿಳಿದಿದ್ದಾರೆ. ಇವರನ್ನು ಪದ್ಮಶ್ರೀ ಪುರಸ್ಕೃತ ಕಲಾವಿದ ಸುದರ್ಶನ್ ಪಟ್ನಾಯಕ್ ಮರಳಿನಲ್ಲಿ ಜಿ-20 ಶೃಂಗಸಭೆಯ ಅತಿ ದೊಡ್ಡ ಲೊಗೋ ಬಿಡಿಸುವ ಮೂಲಕ ಸ್ವಾಗತಿಸಿದ್ದಾರೆ. ಒಡಿಶಾದ ಪುರಿಯಲ್ಲಿ ಲೋಗೋ ಬಿಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಶುಕ್ರವಾರ ಜಿ-20 ಶೃಂಗಸಭೆಯ ಪೂರ್ವಭಾವಿಯಾಗಿ ಅಂತಾರಾಷ್ಟ್ರಿಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅದ್ಭುತ ಲೋಗೋ ಬಿಡಿಸಿದ್ದಾರೆ. ಪುರಿ ಬೀಚ್​ನ ತೀರದಲ್ಲಿ ವಿದ್ಯಾರ್ಥಿಗಳ ಸಹಾಯದಿಂದ ಇದನ್ನು ರಚಿಸಿದ್ದು, ಇದು 150 ಅಡಿ ಉದ್ದ ಮತ್ತು 50 ಅಡಿ ಅಗಲವಿದೆ.

ಮರಳಿನ ಮೇಲೆ ಕೇಸರಿ, ಹಸಿರು ಮತ್ತು ನೀಲಿ ಬಣ್ಣಗಳ ಸುಂದರ ಲೋಗೋ ಚಿತ್ತಾಕಷರ್ಕವಾಗಿದ್ದು, ವಿಶ್ವದಲ್ಲಿ ನಿರ್ಮಿಸಲ್ಪಟ್ಟ ಅತಿದೊಡ್ಡ ಲೊಗೋ ಎಂಬ ದಾಖಲೆ ಬರೆದಿದೆ ಎನ್ನಲಾಗಿದೆ.

ಪದ್ಮಶ್ರೀ ಪುರಸ್ಖೃತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪ್ರಧಾನಿ ಮೋದಿ ಸೇರಿದಂತೆ ಹಲವು ಜನಪ್ರಿಯರ ಮರಳಿನ ಕಲಾಕೃತಿ ರಚಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ. ಇವರು ವಿಶೇಷ ಸಂದರ್ಭಗಳಲ್ಲಿ ವಿಶಿಷ್ಟ ಕಲಾಕೃತಿಗಳನ್ನು ನಿರ್ಮಿಸಿ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತಾರೆ.

ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ವಿವಿಧ ಪ್ರಮುಖ ದೇಶಗಳ ನಾಯಕರು, ಉನ್ನತ ಅಧಿಕಾರಿಗಳು ಮತ್ತು ಹಲವು ಗಣ್ಯರು ಭಾಗವಹಿಸುತ್ತಿದ್ದಾರೆ. ವಸುಧೈವ ಕುಟುಂಬಕಂ, ಒಂದು ದೇಶ ಮತ್ತು ಒಂದು ಭವಿಷ್ಯ ಎನ್ನುವ ಧ್ಯೇಯವಾಕ್ಯದಲ್ಲಿ ಈ ಶೃಂಗಸಭೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net