

ಬೆಂಗಳೂರು: ಸನಾತನ ಭಾರತೀಯ ಶಾಸವು ಶಸಕ್ಕಿಂತಲೂ ಹೆಚ್ಚಿನ ತಾಕತ್ತು ಹೊಂದಿದೆ. ಶಾಸದ ಮೂಲಕ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶಿಷ್ಟ ರಾಷ್ಟ್ರ ಭಾರತ ಎಂದು ಅವಧೂತ ಶ್ರೀವಿನಯ್ ಗುರೂಜಿ ಅಭಿಪ್ರಾಯಿಸಿದ್ದಾರೆ.
ದಾಸರಹಳ್ಳಿ ಕ್ಷೇತ್ರದ ಬಾಗಲಗುಂಟೆಯ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಎಂ.ಇ.ಐ. ಮೈದಾನದಲ್ಲಿ ರೀಪ್ ಫೌಂಡೇಶನ್ ಆಯೋಜಿಸಿದ್ದ ಮಹಾರುದ್ರ ಕಿರಾತ ಮೂರ್ತಿ ಯಜ್ಞಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಶಾಸ್ತ್ರ, ಪದ್ಧತಿಗಳಿಗೆ ವೈಜ್ಞಾನಿಕ ಹಿನ್ನೆಲೆ ಇದೆ. ಪ್ರತಿಯೊಂದು ಆಚರಣೆ ಹಿಂದೆ ವಿಶೇಷ ಮಹತ್ವ ಅಡಗಿದೆ. ಕೊಬ್ಬರಿಎಣ್ಣೆ ಅಥವಾ ತುಪ್ಪದ ದೀಪ ಬೆಳಗುವುದರಿಂದ ವಾತಾವರಣ ಶುದ್ಧಗೊಂಡು ಆಕ್ಸಿಜನ್ ದೊರೆಯುತ್ತದೆ. ಭಾರತವು ಯೋಗಭೂಮಿ, ಇಲ್ಲಿನ ಜ್ಞಾನಶಿಖರವನ್ನು ದೇಶಾದ್ಯಂತ ಪಸರಿಸಿದವರು ಭಗವತ್ಪಾದ ಶಂಕರಾಚಾರ್ಯರು. ಅಂತಹ ಪೂಜ್ಯರು ಜನ್ಮವೆತ್ತಿದ ಪುಣ್ಯಭೂಮಿ ಕೇರಳ. ಕೇರಳದ ಸಂಸ್ಕೃತಿ, ಸಂಸ್ಕಾರಗಳ ಪ್ರಚಾರಕ್ಕೆ ಮಹಾರುದ್ರ ಕಿರಾತ ಯಜ್ಞ ಪೂರಕವಾಗಿದೆ. ಆ ಕಾರ್ಯವನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸುವ ಮೂಲಕ ಗೋಪಿನಾಥ ವನ್ನೇರಿಯವರು ಯಶಸ್ವಿಯಾಗಿದ್ದಾರೆ. ಧಾರ್ಮಿಕ ಕಾರಣಕ್ಕೆ ಎಲ್ಲರೂ ಒಟ್ಟಾಗಿ ಸೇರಿರುವುದು ಸ್ವಾಗತಾರ್ಹ ಎಂದು ಗುರೂಜಿ ತಿಳಿಸಿದರು.
ಮಹಾರುದ್ರದೇವರ ವಿವಿಧ ಅರ್ಚನೆಗಳಲ್ಲಿ ಕಿರಾತಮೂರ್ತಿ ಯಜ್ಞ ಪ್ರಮುಖವಾಗಿದೆ. ಭಗವಂತನಿಗೆ ಸಾವಿರಾರು ಸಂಖ್ಯೆಯಲ್ಲಿ ತೆಂಗಿನಕಾಯಿ ಅರ್ಪಿಸಲಾಗುತ್ತದೆ. ಹಿಂದು ನಂಬಿಕೆಯ ಪ್ರಕಾರ ಮೂರು ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಹೀರುವ ಸಾಮರ್ಥ್ಯ ಹೊಂದಿವೆ. ತೆಂಗಿನಕಾಯಿ, ಕುಂಬಳಕಾಯಿ, ಲಿಂಬೆಹಣ್ಣನ್ನು ಈ ಕಾರಣಕ್ಕಾಗಿ ವಿಶೇಷ ಸಂದರ್ಭಗಳಲ್ಲಿ ಪೂಜೆಗೆ ಬಳಸಲಾಗುತ್ತದೆ ಎಂದು ವಿನಯ್ ಗುರೂಜಿ ವಿವರಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ರಾಮಚಂದ್ರ ಗೌಡ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ಸಂಕೇಶ್ವರ, ಶಾಸಕ ಮುನಿರಾಜು, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು, ಬಿಜೆಪಿ ಯುವ ಮುಖಂಡ ಸಪ್ತಗಿರಿ ಗೌಡ, ರೀಪ್ ಫೌಂಡೇಶನ್ ಅಧ್ಯಕ್ಷ ಗೋಪಿನಾಥ ವನ್ನೇರಿ, ಕಾರ್ಯದರ್ಶಿ ಜಯರಾಜ್, ವಿಶ್ರಾಂತ ಕುಲಪತಿ ನಾರಾಯಣ ಗೌಡ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಪ್ರವೀಣ್ ಶೆಟ್ಟಿ ಮತ್ತಿತರರು ಇದ್ದರು.
ಬೆಳಗ್ಗೆ ಗಣಪತಿ ಹೋಮದೊಂದಿಗೆ ಆರಂಭವಾಗಿ ಸಂಜೆ 1008 ತೆಂಗಿನಕಾಯಿ ಒಡೆದು ಅರ್ಪಿಸುವ ಮೂಲಕ ಮೊದಲನೇ ದಿನದ ಕಾರ್ಯಕ್ರಮ ಮುಕ್ತಾಯವಾಯಿತು. ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ಯಜ್ಞದ ಆಹುತಿ ಭಾಗವಾಗಿ 24 ಸಾವಿರ ತೆಂಗಿನಕಾಯಿಗಳನ್ನು ಒಡೆದು ಅರ್ಪಿಸಲಾಗುತ್ತದೆ.
ಸರ್ವರನ್ನು ಒಟ್ಟಾಗಿ ಕೊಂಡೊಯ್ಯುವುದು ಸನಾತನ ಧರ್ಮದ ಧ್ಯೇಯ. ವಿಶ್ವಕ್ಕೆ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಭಾರತದಲ್ಲಿ ಉತ್ತರವಿದೆ. ಇಲ್ಲಿ ನಡೆಯುವ ಇಂತಹ ಪೂಜೆ, ಪುನಸ್ಕಾರಗಳಲ್ಲಿ ವಿಶೇಷ ಶಕ್ತಿ ಇದೆ. ಆ ಶಕ್ತಿ ಜಾಗತಿಕ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. - ಬ್ರಹ್ಮಶ್ರೀ ಮೋಹನ್‌ಜಿ, ಆಧ್ಯಾತ್ಮ ಚಿಂತಕರು
"ಜಗತ್ತಿನ ಯಾವುದೇ ಮೂಲೆಗೆ ಹೋದರೂ ಭಾರತೀಯರು ಏನಾದರೊಂದು ಸಾಧನೆಯಿಂದ ಗುರುತಿಸಿಕೊಳ್ಳುತ್ತಾರೆ. ಭಾರತೀಯರ ಸಾಧನೆ ಹಿಂದೆ ತಲೆ ತಲಾಂತರದಿಂದ ನಡೆದುಕೊಂಡು ಬಂದಿರುವ ಪೂಜೆ, ಜಪ, ತಪ, ಯಾಗ, ಯಜ್ಞಗಳ ಸಂಸ್ಕಾರವಿದೆ. ಬರಗಾಲ ಮತ್ತಿತರ ಸಂದಿಗ್ಧ ಸಂದರ್ಭಗಳಲ್ಲಿ ಋಷಿಮುನಿಗಳು ಮಾಡುತ್ತಿದ್ದ ಮಹಾರುದ್ರ ಕಿರಾತಮೂರ್ತಿ ಯಜ್ಞವು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ. ಅದರಲ್ಲೂ ದಾಸರಹಳ್ಳಿ ಕ್ಷೇತ್ರದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ" -ಎಸ್.ಮುನಿರಾಜು, ಶಾಸಕರು