

ಹಾವೇರಿ: ಈ ತಾಲೂಕಿನಲ್ಲಿ ಮೂರು ವಾರಗಳ ಹಿಂದೆ ಒಂದು ಅವಘಡ ಸಂಭವಿಸಿತ್ತು. ಇದೀಗ ಮತ್ತೊಮ್ಮೆ ಅಂಥದ್ದೇ ಇನ್ನೊಂದು ಪ್ರಕರಣ ಸಂಭವಿಸಿದ್ದು, ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಮೊಹಮದ್ ಗೌಸ್ ಬೇವಿನಮರದ (20) ಸಾವಿಗೀಡಾದ ಯುವಕ. ಈತ ಮನೆ ನಿರ್ಮಾಣ ಕಾರ್ಯದಲ್ಲಿ ನಿರತನಾಗಿದ್ದಾಗ ಈ ದುರಂತ ಸಂಭವಿಸಿದೆ. ಗದಿಗೆಪ್ಪ ಪುಟ್ಟಪ್ಪ ಇಟಗಿ ಎಂಬವರ ಮನೆ ನಿರ್ಮಾಣದಲ್ಲಿ ತೊಡಗಿಸದ್ದ ಈತ ಕಟ್ಟಡದ ಮೇಲೆ ಬಾರ್ ಬೆಂಡಿಗ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶವಾಗಿ ಸಾವಿಗೀಡಾಗಿದ್ದಾನೆ. ಗಾಯಗೊಂಡಿದ್ದ ಈತನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಹಾವೇರಿ ತಾಲೂಕಿನ ಕೂರಗುಂದ ಗ್ರಾಮದಲ್ಲಿ ಆ. 14ರಂದು ಕೂಡ ಇಂಥದ್ದೇ ಒಂದು ಪ್ರಕರಣ ಸಂಭವಿಸಿತ್ತು. ಲಾರಿ ಚಾಲಕ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಗ್ರಾಮದ ನಿವಾಸಿ ಶೇಬುಲ್ಲಾ (23) ಎಂಬಾತ ಹಾವೇರಿಯ ಕೂರಗುಂದ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಹೂಕೋಸು ತುಂಬಿಕೊಂಡು ವಾಹನದ ಮೇಲೆ ಹತ್ತಿದ್ದು, ಆಗ ಅಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.