

ಸಂಭಾಲ್: ಉತ್ತರ ಪ್ರದೇಶದ ಸಂಭಾಲ್‌ನ ಜಾಮಾ ಮಸೀದಿ(Sambhal Mosque Row) ಮತ್ತು ಹರಿಹರ ದೇವಸ್ಥಾನ ವಿವಾದದ ಕುರಿತು ನ್ಯಾಯಾಲಯದಲ್ಲಿ ಬುಧವಾರ(ಜನವರಿ 8) ವಿಚಾರಣೆ ನಡೆಯಿತು. ಜಾಮಾ ಮಸೀದಿ ಪರ ವಕೀಲರು ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನು ಸ್ಥಳೀಯ ನ್ಯಾಯಾಲಯದಲ್ಲಿ ಸಲ್ಲಿಸಿದರು.
ಸುಪ್ರೀಂಕೋರ್ಟ್‌ನ ಆದೇಶದ ಪ್ರಕಾರ, ಈ ವಿಷಯದ ಬಗ್ಗೆ ಈಗ ಯಾವುದೇ ವಿಚಾರಣೆ ನಡೆಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಮೊಘಲರ ಕಾಲದ ಶಾಹಿ ಜಾಮಾ ಮಸೀದಿ ಮತ್ತು ಅದರ ಸಮೀಕ್ಷೆಗೆ ಸಂಬಂಧಿಸಿದ ಪ್ರಕರಣದ ಮುಂದಿನ ವಿಚಾರಣೆಯನ್ನು ಸಂಭಾಲ್‌ನ ಸ್ಥಳೀಯ ನ್ಯಾಯಾಲಯವು ಮಾರ್ಚ್ 5ರಂದು ನಿಗದಿಪಡಿಸಿದೆ.
ಮುಂದಿನ ಆದೇಶದವರೆಗೆ ಯಾವುದೇ ಪೂಜಾ ಸ್ಥಳದ ಸಮೀಕ್ಷೆಗಳನ್ನು ಕೋರಿ ಹೊಸ ದಾವೆಗಳನ್ನು ಸ್ವೀಕರಿಸದಂತೆ ಸುಪ್ರೀಂಕೋರ್ಟ್ ಎಲ್ಲಾ ಕೆಳ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ. ನಾವು ಈ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಅದು ಮಾರ್ಚ್ 5 ರಂದು ಮುಂದಿನ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ ಎಂದು ಜಾಮಾ ಮಸೀದಿ ಪರ ವಕೀಲ ಶಕೀಲ್ ಅಹ್ಮದ್ ವಾರಿ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಪುರಾತನವಾದ ಹರಿಹರ ದೇವಸ್ಥಾನದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಹಿಂದೂಗಳ ವಾದದ ಬಗ್ಗೆ ನ್ಯಾಯಾಲಯವು ನಿರ್ಧರಿಸುತ್ತದೆ ಎಂದು ವಾರಿ ಹೇಳಿದರು. ಅದು ಹರಿಹರ ದೇವಸ್ಥಾನವಲ್ಲ ಜಾಮಾ ಮಸೀದಿ ಎಂಬುದನ್ನು ನಾವು ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ. ನಮ್ಮ ಬಳಿ ಎಲ್ಲಾ ಸಾಕ್ಷ್ಯಗಳಿವೆ ಎಂದು ಅವರು ಹೇಳಿದರು. ಮಾರ್ಚ್ 5 ರಂದು ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಹಿಂದೂ ಪರ ವಕೀಲ ಗೋಪಾಲ್ ಶರ್ಮಾ ಖಚಿತಪಡಿಸಿದ್ದಾರೆ.
ನವೆಂಬರ್ 19 ರಂದು ಸಂಭಾಲ್‌ನ ಶಾಹಿ ಜಾಮಾ ಮಸೀದಿಯು ಶ್ರೀ ಹರಿಹರ ದೇವಸ್ಥಾನ ಎಂದು ಹಿಂದೂ ಕಡೆಯವರು ಸಿವಿಲ್ ಸೀನಿಯರ್ ಡಿವಿಷನ್ ಚಂದೌಸಿ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು. ನವೆಂಬರ್ 19ರ ಸಂಜೆ ಮಸೀದಿಯ ಮೊದಲ ಹಂತದ ಸಮೀಕ್ಷೆ ನಡೆಸಲಾಯಿತು. ಎರಡನೇ ಹಂತದ ಸಮೀಕ್ಷೆಯನ್ನು ನವೆಂಬರ್ 24 ರಂದು ನಡೆಸಲಾಯಿತು. ಎರಡನೇ ಬಾರಿಗೆ ಮಸೀದಿಯಲ್ಲಿ ನಡೆಯುತ್ತಿರುವ ಸಮೀಕ್ಷೆಯ ಸಮಯದಲ್ಲಿ ಸಾವಿರಾರು ಜನರು ಜಮಾಯಿಸಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. (ಏಜೆನ್ಸೀಸ್)