

ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದಷ್ಟೇ ನಟ ನಾಗಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಶೀಘ್ರದಲ್ಲೇ ಈ ತಾರಾ ಜೋಡಿ ಹಸೆಮಣೆ ಸಹ ಏರಲಿದ್ದು, ಈ ಜೋಡಿ ಜೊತೆಯಾಗಿ ಹಲವು ಬಾರಿ ವಿದೇಶ ಪ್ರವಾಸ ಕೂಡ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಚೈತನ್ಯ ಆಗಲಿ ಶೋಭಿತಾ ಆಗಲಿ ತಮ್ಮ ಪ್ರೀತಿಯ ಬಗ್ಗೆ ಒಮ್ಮೆಯೂ ಬಾಯ್ಬಿಟ್ಟಿರಲಿಲ್ಲ. ಆದರೆ, ಆಗಸ್ಟ್ 8ರಂದು ಈ ಪ್ರೇಮ ಪಕ್ಷಿಗಳು ನಿಶ್ಚಿತಾರ್ಥ ಮಾಡಿಕೊಂಡು ಪ್ರೇಮ ವದಂತಿಗಳಿಗೆ ಅಧಿಕೃತ ಮುದ್ರೆಯನ್ನು ಈ ಜೋಡಿ ಒತ್ತಿದ್ದಾರೆ.
ನಾಗಚೈತನ್ಯ ಮತ್ತು ಶೋಭಿತಾ ನಿಶ್ಚಿತಾರ್ಥ ಸುದ್ದಿ ಹೊರಬೀಳುತ್ತಿದ್ದಂತೆ ಸಮಂತಾ ಹೆಸರು ಕೂಡ ಹೆಚ್ಚು ಚಾಲ್ತಿಯಲ್ಲಿದೆ. ಏಕೆಂದರೆ, ಸಮಂತಾ ಈ ಹಿಂದೆ ನಾಗಚೈತನ್ಯ ಮಡದಿಯಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಸಿ, 2017 ರಲ್ಲಿ ಮದುವೆಯಾಗಿದ್ದರು. ಆದರೆ, ಇಬ್ಬರಲ್ಲಿನ ಭಿನ್ನಾಭಿಪ್ರಾಯಗಳ ಕಾರಣದಿಂದ 2021ರಲ್ಲಿ ಬೇರ್ಪಟ್ಟರು. ಇಬ್ಬರ ಡಿವೋರ್ಸ್ ಕೂಡ ಭಾರಿ ಸುದ್ದಿಯಾಗಿತ್ತು. ಡಿವೋರ್ಸ್ ಆದ ಕೆಲವೇ ವರ್ಷಗಳಲ್ಲಿ ನಾಗಚೈತನ್ಯ ಮತ್ತೊಂದು ಮದುವೆಗೆ ತಯಾರಿ ಮಾಡಿಕೊಂಡಿದ್ದು, ಈ ಬಗ್ಗೆ ಸಮಂತಾ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಹೀಗಾಗಿ ಸಮಂತಾ ಪ್ರತಿಕ್ರಿಯೆ ಬಗ್ಗೆ ನೆಟ್ಟಿಗರ ಹುಡುಕಾಟ ನಡೆದಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಸಮಂತಾ ಅವರ ಸಾಮಾಜಿಕ ಜಾಲತಾಣದ ಮೇಲೆ ಅಭಿಮಾನಿಗಳು ಕಣ್ಣಿಟ್ಟಿದ್ದು ನಟಿ ಸಮಂತಾ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ಅವರು, ಪ್ರೀತಿ ಎಂದರೆ ತ್ಯಾಗ ಎಂದು ಹೇಳಿದ್ದಾರೆ. ನಾನು ಕೂಡ ಈ ಮಾತನ್ನು ಒಪ್ಪುತ್ತೇನೆ. ಆದರೆ ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ನಾನು ಅರಿತ ವಿಚಾರವೇನೆಂದರೆ ಕೆಲವೊಮ್ಮೆ ಬೇರೆಯವರು ನಮಗೆ ಪ್ರೀತಿಯನ್ನು ಮರಳಿ ಕೊಡದೇ ಇದ್ದರೂ ನಾವು ಅವರಿಗೆ ಪ್ರೀತಿಯನ್ನು ಕೊಡಬೇಕಾಗುತ್ತೆ, ಕೊಡ್ತಾನೇ ಇರಬೇಕಾಗುತ್ತೆ. ಒಂದು ಹಂತದಲ್ಲಿ ಸಮತೋಲನ ಕಳೆದುಕೊಂಡರೂ ಕೂಡ ಪ್ರೀತಿ ಒಂದು ತ್ಯಾಗವಾಗುತ್ತೆ. ನನ್ನಿಂದ ಪ್ರೀತಿಯನ್ನು ಮರಳಿ ನೀಡಲು ಆಗದೇ ಇದ್ದರೂ ಕೂಡ ನನ್ನನ್ನೂ ಇಷ್ಟಪಡುವ, ನನ್ನ ಮೇಲೆ ಪ್ರೀತಿಯ ಮಳೆಗೈಯುವ ಎಲ್ಲರಿಗೂ ನಾನು ಆಭಾರಿ ಎಂಬ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ.
ಸಮಂತಾ ಅವರ ಈ ಪೋಸ್ಟ್ಗೆ ಕಾಮೆಂಟ್ಗಳ ಸುರಿಮಳೆ ಹರಿದುಬರುತ್ತಿವೆ. ಪರೋಕ್ಷವಾಗಿ ನಾಗಚೈತನ್ಯ-ಶೋಭಿತಾ ನಿಶ್ಚಿತಾರ್ಥಕ್ಕೆ ಟಾಂಗ್ ಕೊಟ್ಟಂತಿದೆ ಎಂದು ಹಲವರು ಅಭಿಪ್ರಾಯ ತಿಳಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಸಮಂತಾ ಅವರ ನಿರೀಕ್ಷಿತ ಸ್ಪೈ ಥ್ರಿಲ್ಲರ್ ಸರಣಿ “ಸಿಟಾಡೆಲ್ ಹನಿ ಬನ್ನಿ” ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುತ್ತಿದೆ. ಬಾಲಿವುಡ್ ನಟ ವರುಣ್ ಧವನ್ ಜತೆ ನಟಿಸಿದ್ದಾರೆ. ಈ ಸರಣಿಯು ಹಾಲಿವುಡ್ ವೆಬ್ ಸರಣಿ ಸಿಟಾಡೆಲ್ನ ರೀಮೇಕ್ ಆಗಿದೆ. ಇದರ ಹೊರತಾಗಿ ಮತ್ತೊಂದೆಡೆ ಅಗ್ರ ಒಟಿಟಿ ಕಂಪನಿ ನೆಟ್ಫ್ಲಿಕ್ಸ್ನೊಂದಿಗೆ “ರಕ್ತ ಬ್ರಹ್ಮಾಂಡ” ಎಂಬ ಸರಣಿಯಲ್ಲಿ ಸಮಂತಾ ನಟಿಸಲಿದ್ದಾರೆ. ಈ ಸರಣಿಯನ್ನು “ತುಂಬದ್” ಖ್ಯಾತಿಯ ನಿರ್ದೇಶಕ ಅನಿಲ್ ರಾಹಿ ಬರ್ವೆ ನಿರ್ದೇಶಿಸಿದ್ದಾರೆ. ಇದರಲ್ಲೂ ಸಮಂತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.