ಉತ್ತಮ ಸಮಾಜ ಸೇವೆಗೆ ಪ್ರಶಸ್ತಿ ಗೆದ್ದ ಸಮಂತಾ! ಫೋಟೋ ವೈರಲ್...

Published on
ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಅವರು ಬೆಳ್ಳಿ ತೆರೆಯ ಮೇಲೆ ಮತ್ತು ಆಫ್ ಸ್ಕ್ರೀನ್​ನಲ್ಲೂ ತಮ್ಮ ಅಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ. ಸಮಂತಾ ಕೇವಲ ಅವರ ಸಿನಿಮಾಗಳಿಂದ ಮಾತ್ರವಲ್ಲದೇ ಸಾಮಾಜಿಕ ಚಟುವಟಿಕೆಗಳಿಂದ ಕೂಡಾ ಅಭಿಮಾನಿಗಳನ್ನು ಬಹಳಷ್ಟು ಬಾರಿ ಹೆಮ್ಮೆ ಪಡಿಸಿದ್ದಾರೆ. ಇತ್ತೀಚೆಗೆ, ಸಮಂತಾ 'ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021' ಪ್ರಶಸ್ತಿಯನ್ನು ಸಾಧಿಸಿದ್ದಾರೆ. ಹೀಗಾಗಿ, ನಟಿ ಅವರಿಗೆ ಸಿಕ್ಕ ಪ್ರಶಸ್ತಿ ಪದಕದೊಂದಿಗೆ ಒಂದು ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳೊಂದಿಗೆ ಪ್ರಶಸ್ತಿ ಸಿಕ್ಕ ಸಂತೋಷವನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು, ತಮ್ಮ ಎನ್‌ಜಿಒ ಆದ ಪ್ರತ್ಯೂಷಾ ಮೂಲಕ ನಟಿ ಸಮಂತಾ ತಾವು ಸಮಾಜಕ್ಕೆ ಮಾಡುತ್ತಿರುವ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಅವರ ಪ್ರಯತ್ನಗಳಿಗೆ ಈ ಪ್ರಶಸ್ತಿಯನ್ನು ನಟಿ ಮುಡಿಗೇರಿಸಿಕೊಂಡಿದ್ದಾರೆ. "ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ 2021' ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. @pratyushasupportorg ಮೂಲಕ ಸಮಾಜ ಕಲ್ಯಾಣ ಕ್ಷೇತ್ರದಲ್ಲಿ ನನ್ನ ಕೆಲಸವನ್ನು ಈ ಪ್ರಶಸ್ತಿ ಗುರುತಿಸಿದೆ'', ಎಂಬ ಕ್ಯಾಪ್ಷನ್ ಅನ್ನು ತಮ್ಮ ಪೋಸ್ಟ್​ಗೆ ನೀಡಿದ್ದಾರೆ ಸ್ಯಾಮ್. ನಟಿ ಈ ಪೋಸ್ಟ್ ಅನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1.2 ಮಿಲಿಯನ್ ಲೈಕ್ಸ್, 3,500 ಕಾಮೆಂಟ್​ಗಳು ಬಂದಿವೆ.
ಚಾಂಪಿಯನ್ಸ್ ಆಫ್ ಚೇಂಜ್ ತೆಲಂಗಾಣ ಪ್ರಶಸ್ತಿ ವಿತರಣಾ ಸಮಾರಂಭವನ್ನು ಇದೇ ತಿಂಗಳ ಫೆಬ್ರವರಿ 25 ರಂದು ಹೈದರಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ಇದು ಚಾಂಪಿಯನ್ಸ್ ಆಫ್ ಚೇಂಜ್ ರಾಷ್ಟ್ರೀಯ ಪ್ರಶಸ್ತಿಯ ರಾಜ್ಯ ಆವೃತ್ತಿಯಾಗಿದ್ದು, ಧೈರ್ಯ, ಸಮುದಾಯ ಸೇವೆ ಮತ್ತು ಸಾಮಾಜಿಕ ಅಭಿವೃದ್ಧಿಯ ಮೌಲ್ಯಗಳನ್ನು ಉತ್ತೇಜಿಸಲು ಪ್ರಖ್ಯಾತ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾಡಿದ ಮಹಾನ್ ಕೆಲಸವನ್ನು ಗೌರವಿಸುತ್ತದೆ. ಟಿಆರ್‌ಎಸ್ ಸಂಸದ ಸಂತೋಷ್ ಕುಮಾರ್, ಮೈ ಹೋಮ್ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ.ರಾಮೇಶ್ವರರಾವ್ ಜುಪಲ್ಲಿ ಸೇರಿದಂತೆ ಹಲವರು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net