

Virat Kohli: ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ನಡುವೆ ಐಪಿಎಲ್ ಟೂರ್ನಿ ಸ್ಥಗಿತದ ನಂತರ, ವಿರಾಟ್ ಕೊಹ್ಲಿ ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಕಿಸ್ತಾನದೊಂದಿಗಿನ ಹೆಚ್ಚುತ್ತಿರುವ ಹಗೆತನದ ಸಂದರ್ಭದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯವನ್ನು ಶ್ಲಾಘಿಸುತ್ತಾ, ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುವ ಸೇನೆ ಜತೆ ನಾವಿದ್ದೇವೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ಭೀತಿಯಿಂದಾಗಿ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಸ್ಥಗಿತಗೊಳಿಸಿದ ಬೆನ್ನಲ್ಲೇ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರತೀಯ ಸೇನೆಗೆ ಬೆಂಬಲ ಸೂಚಿಸಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸಿದ್ದಕ್ಕಾಗಿ ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ನಿಂತು ಅವರಿಗೆ ನಮಸ್ಕರಿಸುತ್ತೇವೆ. ರಾಷ್ಟ್ರಕ್ಕಾಗಿ ನಮ್ಮ ವೀರರ ಧೈರ್ಯ ಮತ್ತು ತ್ಯಾಗಗಳಿಗೆ ಹೃತ್ಪೂರ್ವಕ ಕೃತಜ್ಞತೆ, ನಾವು ಅವರಿಗೆ ಎಂದೆಂದಿಗೂ ಋಣಿಯಾಗಿದ್ದೇವೆ. ಜೈ ಹಿಂದ್" ಎಂದು ಮನದ ಮಾತನ್ನು ಹಂಚಿಕೊಂಡಿದ್ದಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕ್ ಉಗ್ರರು 26 ಪ್ರವಾಸಿಗರನ್ನು ಬಲಿಪಡೆದ ಘಟನೆಯು ಈಗ ಯುದ್ಧ ಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ಪಹಲ್ಗಾಮ್ ಘಟನೆಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ವಿವಿಧ ಉಗ್ರ ನೆಲೆಗಳನ್ನು ಗುರಿ ಮಾಡಿ ಕ್ಷಿಪಣಿ ದಾಳಿ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತೀಯ ಗಡಿಭಾಗದಲ್ಲಿ ಜನಸಾಮಾನ್ಯರ ವಾಸಸ್ಥಳಗಳ ಮೇಲೆಯೇ ದಾಳಿ ಮಾಡುತ್ತಿದೆ. ಪಾಕಿಸ್ತಾನದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನ ಸ್ಥಿತಿಯ ಕಾರಣ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ ಟೂರ್ನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲು ಶುಕ್ರವಾರ ನಿರ್ಧರಿಸಿದೆ. ಗುರುವಾರ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅರ್ಧಕ್ಕೆ ರದ್ದುಗೊಳಿಸಲಾಯಿತು. ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಿಂದ ಆಟಗಾರರು ಮತ್ತು ಪ್ರೇಕ್ಷಕರನ್ನು ಸ್ಥಳಾಂತರಿಸಲಾಯಿತು.(ಏಜೆನ್ಸೀಸ್)