ನಮ್ಮ ಸೇನೆ ಭಯೋತ್ಪಾದಕರಿಗೆ ಸೂಕ್ತ ಉತ್ತರ ನೀಡಿದೆ; ಭಾರತ ವಿಜಯಶಾಲಿಯಾಗಿಯೇ ಉಳಿಯುತ್ತದೆ; ಪಾಕಿಸ್ತಾನಕ್ಕೆ ಯೋಗಿ ಆದಿತ್ಯನಾಥ್ ಸವಾಲು| Yogi adityanath

UP CM Yogi
Published on

ಪೂರ್ಣ ಸಮಗ್ರತೆ ಮತ್ತು ಜವಾಬ್ದಾರಿಯೊಂದಿಗೆ, ನಾವೆಲ್ಲರೂ ನಮ್ಮ ಸಶಸ್ತ್ರ ಪಡೆಗಳ ನೈತಿಕತೆಯನ್ನು ಹೆಚ್ಚಿಸಬೇಕು. ನಾವು ನಮ್ಮ ಭದ್ರತಾ ಪಡೆಗಳೊಂದಿಗೆ ದೃಢವಾಗಿ ನಿಲ್ಲಬೇಕು. ಅಂತಹ ಸಮಯದಲ್ಲಿ ನಮ್ಮ ಭದ್ರತೆಗೆ ಬೆದರಿಕೆ ಹಾಕುವ ಕೃತ್ಯವನ್ನು ಹೊರಗೆಳೆಯಬೇಕು ಎಂದು ಹೇಳಿದ್ದಾರೆ.

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಏಕತೆಯ ಬಲವಾದ ಸಂದೇಶವನ್ನು ನೀಡಿದ್ದಾರೆ. ಲಕ್ನೋದಲ್ಲಿ ಶುಕ್ರವಾರ (9) ಮಹಾರಾಣಾ ಪ್ರತಾಪ್ ಜಯಂತಿಯಂದು ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್​ಅವರು ಸಶಸ್ತ್ರ ಪಡೆಗಳನ್ನು ಶ್ಲಾಘಿಸುತ್ತಾ ಭಾರತ ಯಾವಾಗಲೂ ವಿಜಯ ಸಾಧಿಸಲಿದೆ ಎಂದು ಹೇಳಿದ್ದಾರೆ.

ನಮ್ಮ ಪ್ರವಾಸಿಗರ ಮೇಲೆ ಎಷ್ಟು ಅನಾಗರಿಕವಾಗಿ ದಾಳಿ ನಡೆಸಲಾಯಿತು ಎಂಬುದನ್ನು ನೀವೆಲ್ಲರೂ ನೋಡಿರಬೇಕು. ಪ್ರಧಾನಿ ನರೇಂದ್ರ ಮೋದಿ ದೃಢ ಸಂಕಲ್ಪ ಮಾಡಿದ್ದಾರೆ ಮತ್ತು ನಮ್ಮ ಧೈರ್ಯಶಾಲಿ ಸೈನಿಕರು ಪಾಕಿಸ್ತಾನಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಪಾಕಿಸ್ತಾನ ಕೇವಲ ಭಯೋತ್ಪಾದನೆಯನ್ನು ರಕ್ಷಿಸುತ್ತಿಲ್ಲ ಬದಲಿಗೆ ಅದು ಭಯೋತ್ಪಾದನೆಯಲ್ಲಿ ನೇರವಾಗಿ ಭಾಗಿಯಾಗಿದೆ. ಭಾರತವು ಬಲವಾದ ಪ್ರತ್ಯುತ್ತರ ನೀಡಲು ನಿರ್ಧರಿಸಿದೆ ಎಂದು ಹೇಳಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ವಿವಿಧ ಕಿಡಿಗೇಡಿತನಗಳು ನಡೆಯುತ್ತಿದೆ ಮತ್ತು ವದಂತಿಗಳನ್ನು ಹರಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದರ ಬಗ್ಗೆ ಚಿಂತಿಸದೆ ಇಡೀ ರಾಷ್ಟ್ರವು ಕೇಂದ್ರ ನಾಯಕತ್ವ, ವಿಶೇಷವಾಗಿ ನಮ್ಮ ಗೌರವಾನ್ವಿತ ಪ್ರಧಾನಿ ಮೋದಿ ಅವರು ನೀಡುವ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಅವರು ಹೇಳಿದರು.

ಡ್ರೋನ್‌ಗಳನ್ನು ನಾಶಮಾಡಲು ಸೇನೆಯು ಹಲವಾರು ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿತು. ಈ ಕಾರ್ಯಾಚರಣೆಯಲ್ಲಿ ಎಲ್-70 ಬಂದೂಕುಗಳು, ಜು-23ಎಂಎಂ, ಶಿಲ್ಕಾ ವ್ಯವಸ್ಥೆಗಳು ಮತ್ತು ಇತರ ಸುಧಾರಿತ ಕೌಂಟರ್-ಯುಎಎಸ್ ಉಪಕರಣಗಳನ್ನು ಬಳಸಲಾಯ್ತು.

ನಿನ್ನೆ ರಾತ್ರಿ ಪಾಕಿಸ್ತಾನ ನಿಯಂತ್ರಣ ರೇಖೆ (LOC) ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ (IB) ವಿವಿಧ ಸ್ಥಳಗಳಿಗೆ ಹಲವು ಡ್ರೋನ್‌ಗಳನ್ನು ಕಳುಹಿಸಲು ವಿಫಲ ಪ್ರಯತ್ನಗಳನ್ನು ಮಾಡಿತು. ಈ ಸಂದರ್ಭದಲ್ಲಿ ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ನಡೆಸಿದ ದೊಡ್ಡ ಪ್ರಮಾಣದ ಪ್ರತಿ-ಡ್ರೋನ್ ಕಾರ್ಯಾಚರಣೆಯಲ್ಲಿ 50ಕ್ಕೂ ಹೆಚ್ಚು ಡ್ರೋನ್‌ಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಿದವು ಎಂದು ಹೇಳಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net