ನಾವು ದಕ್ಷಿಣದ ಚಿತ್ರಗಳನ್ನೂ ನೋಡ್ತೇವೆ ಆದ್ರೆ ಅವರಿಗೆ ನಾವಂದ್ರೆ ಲೆಕ್ಕಕ್ಕಿಲ್ಲ: ಸಲ್ಮಾನ್​ ಖಾನ್​ ಬೇಸರ! Salman Khan

Salman Khan
Published on

Salman Khan : ನಾವು ದಕ್ಷಿಣ ಭಾರತದ ಸಿನಿಮಾಗಳನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸುತ್ತೇವೆ ಆದರೆ, ನಮ್ಮ ಸಿನಿಮಾಗಳನ್ನು ದಕ್ಷಿಣ ಭಾರತದಲ್ಲಿ ಬೆಂಬಲಿಸುವುದಿಲ್ಲ. ಅಲ್ಲಿನ ಸಿನಿ ಅಭಿಮಾನಿಗಳು ಹಿಂದಿ ಸಿನಿಮಾಗಳನ್ನು ನೋಡಲು ಚಿತ್ರಮಂದಿರಗಳಿಗೆ ಬರುವುದಿಲ್ಲ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಹೇಳಿದ್ದಾರೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಿಕಂದರ್ ಸಿನಿಮಾ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್ ಖಾನ್, ದಕ್ಷಿಣ ಭಾರತದಲ್ಲಿ ಸಿನಿಮಾ ಕತೆಗಳನ್ನು ನಕಲು ಮಾಡುವುದಿಲ್ಲ. ಅವರು ತಮ್ಮದೇ ಆದ ಆಲೋಚನೆಗಳೊಂದಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುತ್ತಾರೆ ಮತ್ತು ಸಿನಿಮಾಗಳನ್ನು ಮಾಡುತ್ತಾರೆ ಎಂದು ಸಲ್ಮಾನ್​ ಹೊಗಳಿದರು.

ಮಾತು ಮುಂದುವರಿಸಿದ ಸಲ್ಮಾನ್​, ಅಲ್ಲಿ ತಯಾರಾಗುವ ಪ್ರತಿಯೊಂದು ಚಿತ್ರವೂ ಅದ್ಭುತ ಎಂದು ಅರ್ಥವಲ್ಲ. ಪ್ರತಿ ವಾರ ಎರಡು ಅಥವಾ ಮೂರು ಸಿನಿಮಾಗಳು ದಕ್ಷಿಣದಲ್ಲಿ ಬಿಡುಗಡೆಯಾಗುತ್ತವೆ. ಅವೆಲ್ಲವೂ ಯಶಸ್ವಿಯಾಗುವುದಿಲ್ಲ. ಅಲ್ಲಿ ಅಥವಾ ಇಲ್ಲಿ ಒಳ್ಳೆಯ ಚಿತ್ರ ಮಾತ್ರ ಹಿಟ್ ಆಗುತ್ತದೆ. ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಿದ ಚಿತ್ರಗಳು ಮಾತ್ರ ನಮಗೆ ನೆನಪಿರುತ್ತವೆ. ಅದೇ ನಿಯಮ ದಕ್ಷಿಣಕ್ಕೂ ಅನ್ವಯಿಸುತ್ತದೆ. ಅದೇ ರೀತಿ, ದಕ್ಷಿಣದ ಚಿತ್ರಗಳು ಉತ್ತರದಲ್ಲಿ ಬಹಳ ಜನಪ್ರಿಯವಾಗಿವೆ. ಆದರೆ, ಅವರು ಹಿಂದಿ ಚಿತ್ರಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ ಎಂದರು.

ದಕ್ಷಿಣ ಭಾರತದವರು ನನ್ನನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ನನ್ನನ್ನು ಭಾಯಿ ಎಂದು ಮಾತನಾಡಿಸುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಹೋಗಿ ನನ್ನ ಚಿತ್ರಗಳನ್ನು ನೋಡುವುದಿಲ್ಲ. ಉತ್ತರದಲ್ಲಿ ದಕ್ಷಿಣದ ಚಿತ್ರಗಳನ್ನು ಬೆಂಬಲಿಸುವಷ್ಟು ದಕ್ಷಿಣದಲ್ಲಿ ಬಾಲಿವುಡ್ ಚಿತ್ರಗಳನ್ನು ಬೆಂಬಲಿಸುವುದಿಲ್ಲ. ರಜನಿಕಾಂತ್, ಸೂರ್ಯ, ಚಿರಂಜೀವಿ, ರಾಮ್ ಚರಣ್ ಅವರಂತಹ ಸ್ಟಾರ್ ಚಿತ್ರಗಳು ಬಿಡುಗಡೆಯಾದಾಗ, ನಾವೆಲ್ಲರೂ ಹೋಗಿ ಅವುಗಳನ್ನು ನೋಡುತ್ತೇವೆ. ಆದರೆ, ಅವರ ಅಭಿಮಾನಿಗಳು ಆ ನಾಯಕರಿಗೆ ಮಾತ್ರ ನಿಷ್ಠರಾಗಿರುತ್ತಾರೆ. ಅವರು ನಮ್ಮ ಚಿತ್ರಗಳನ್ನು ನೋಡುವುದಿಲ್ಲ ಎಂದು ಸಲ್ಮಾನ್ ಹೇಳಿದರು.

ಸಿಕಂದರ್ ಸಿನಿಮಾ ವಿಷಯಕ್ಕೆ ಬಂದರೆ, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಇಂದು (ಮಾರ್ಚ್ 30) ಬಿಡುಗಡೆಯಾಗಿದೆ. ಎ.ಆರ್. ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್ ಮತ್ತು ಶರೀಬ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net