ಆರ್​ಸಿಬಿಗೆ ಇನ್ಮುಂದೆ ಕೊಹ್ಲಿಯ... ಸಿಎಸ್​ಕೆ ವಿರುದ್ಧ ಗೆದ್ದ ಬೆನ್ನಲ್ಲೇ ಅಚ್ಚರಿಯ ಹೇಳಿಕೆ ಕೊಟ್ಟ ಆಕಾಶ್​ ಚೋಪ್ರಾ! RCB

RCB
Published on

RCB : ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಉತ್ತಮ ಫಾರ್ಮ್‌ನಲ್ಲಿದೆ. ಆರ್​ಸಿಬಿ ಸತತ ಎರಡನೇ ಪಂದ್ಯವನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಶುಕ್ರವಾರ (ಮಾರ್ಚ್​ 28) ಚೆಪಾಕ್‌ನಲ್ಲಿ ನಡೆದ ಪಂದ್ಯದಲ್ಲಿ ಆರ್​ಸಿಬಿ, ಸಿಎಸ್​ಕೆ ವಿರುದ್ಧ 50 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ, ಚೆನ್ನೈ ಭದ್ರಕೋಟೆಯನ್ನು ಬೆಂಗಳೂರು ಕೆಡವಿದೆ. 2008ರ ಸೀಸನ್​ನ ನಂತರ ಆರ್​ಸಿಬಿ ಚೆಪಾಕ್‌ನಲ್ಲಿ ಸಿಎಸ್​ಕೆ ತಂಡವನ್ನು ಸೋಲಿಸಿದ್ದು ಇದೇ ಮೊದಲು.

ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿ, 30 ಎಸೆತಗಳಲ್ಲಿ ಕೇವಲ 31 ರನ್‌ಗಳಿಗೆ ಔಟಾದರು. ಈ ಸಂದರ್ಭದಲ್ಲಿ, ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಕೊಹ್ಲಿ ಇನ್ನಿಂಗ್ಸ್ ಬಗ್ಗೆ ಕೆಲವು ಪ್ರಮುಖ ಟೀಕೆಗಳನ್ನು ಮಾಡಿದ್ದಾರೆ.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚೆನ್ನೈ ಬೌಲರ್‌ಗಳನ್ನು ಎದುರಿಸಲು ತುಂಬಾ ಕಷ್ಟಪಟ್ಟರು. ಕೊಹ್ಲಿ ತಾನು ಎದುರಿಸಿದ ಮೊದಲ ಎಸೆತದಿಂದಲೇ ಆರಾಮದಾಯಕವಾಗಿ ಕಾಣಲಿಲ್ಲ. ಅವರು ಹೆಚ್ಚಾಗಿ ಲೆಗ್ ಸೈಡ್ ಶಾಟ್‌ಗಳನ್ನು ಆಡಲು ಪ್ರಯತ್ನಿಸಿದರು. ಆದರೆ, ಅವರಿಗೆ ಚೆಂಡನ್ನು ಮಿಡಲ್ ಮಾಡಲು ಸಾಧ್ಯವಾಗಲಿಲ್ಲ. ಪತಿರಾಣ ಬೌಲಿಂಗ್ ಮಾಡುವಾಗ ಚೆಂಡು ಅವರ ಹೆಲ್ಮೆಟ್‌ಗೆ ಬಲವಾಗಿ ತಗುಲಿತು. ಇದಾದ ತಕ್ಷಣವೇ ಅವರು ಒಂದು ಸಿಕ್ಸರ್​ ಮತ್ತು ಒಂದು ಬೌಂಡರಿ ಬಾರಿಸಿ, ಮತ್ತೆ ಬ್ಯಾಟಿಂಗ್​ ಲಯ ಕಂಡುಕೊಂಡಂತೆ ತೋರುತ್ತಿತ್ತು. ಆದರೆ ತಕ್ಷಣವೇ, ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಸ್ವೀಪ್ ಆಡುವಾಗ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಕ್ಯಾಚ್ ಕೊಟ್ಟರು. ಇದು ಕೊಹ್ಲಿಯ ಇನ್ನಿಂಗ್ಸ್ ಆಗಿರಲಿಲ್ಲ. ಕೊಹ್ಲಿ ವಿಫಲವಾದರೂ, ಉಳಿದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ.

ವಿರಾಟ್ 30 ಎಸೆತಗಳಲ್ಲಿ 31 ರನ್ ಗಳಿಸಿದರು. ಉಳಿದ ಆಟಗಾರರು ಅಬ್ಬರಿಸಿದ್ದರಿಂದ ಆರ್‌ಸಿಬಿ 196 ರನ್ ಗಳಿಸಿತು. ಅಂದರೆ, ಕೊಹ್ಲಿ 5 ಓವರ್ ಆಡಿದರೂ ಉಳಿದ ಆಟಗಾರರು ತಂಡಕ್ಕೆ 15 ಓವರ್‌ಗಳಲ್ಲಿ 166 ರನ್ ನೀಡಿದರು. ಈ ಹಿಂದೆ ಕೊಹ್ಲಿ ಉತ್ತಮವಾಗಿ ಆಡಿದಾಗ, ಉಳಿದ ಆರ್‌ಸಿಬಿ ಬ್ಯಾಟರ್‌ಗಳು ನಿರಾಶೆಗೊಳಿಸುತ್ತಿದ್ದರು. ಪ್ರತಿ ಬಾರಿಯೂ ತಂಡ 15 ರಿಂದ 20 ರನ್‌ಗಳಿಂದ ಹಿಂದುಳಿಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೊಹ್ಲಿ ಕಷ್ಟಪಡುತ್ತಿದ್ದರೂ ಉಳಿದ ಆಟಗಾರರು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ. ಇದೀಗ ಆರ್​ಸಿಬಿ ಕೊಹ್ಲಿಯನ್ನು ಅವಲಂಬಿಸಿಲ್ಲ, ಆರ್‌ಸಿಬಿ ಬ್ಯಾಟಿಂಗ್ ಲೈನ್-ಅಪ್ ಅದ್ಭುತವಾಗಿದೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net