

ಕರೊನಾ ಲಾಕ್ಡೌನ್ ಹೊತ್ತಲ್ಲಿ, ಮನರಂಜನೆ ನೀಡುವುದರ ಜತೆಗೆ ಸದಾ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಸಿಕೊಂಡು ಜನಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ಬಾಲಿವುಡ್ ನಟ ಸಲ್ಮಾನ್ ಖಾನ್. ನಿರ್ಗತಿಕರಿಗೆ, ಸಿನಿಮಾ ಕಾರ್ಮಿಕರಿಗೆ ಈಗಾಗಲೇ ಬಾಯಿಜಾನ್ ಮನ ಮಿಡಿದಿದೆ. ಕೋಟಿ ಕೋಟಿ ಹಣವನ್ನು ಹಲವು ಸಂಘಟನೆಗಳಿಗೆ ನೀಡಿದ್ದಾರೆ. ಇದೀಗ ರಂಜಾನ್ ಹಬ್ಬದ ಪ್ರಯುಕ್ತ 5 ಸಾವಿರ ಕುಟುಂಬಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಣೀತಾ ಶಭಾಷ್: ಗ್ಲಾಮರ್ ಹುಡುಗಿಯ ಇನ್ನೊಂದು ಮುಖ
ಹೌದು, ರಂಜಾನ್ ಅಂದ ತಕ್ಷಣ ಹಬ್ಬದ ಪ್ರಯುಕ್ತ ಸಿಹಿ ಶಾವಿಗೆ ಮಾಡುವುದು ಸಂಪ್ರದಾಯ. ಆ ಶಾವಿಗೆ ಮಾಡಲು ಬೇಕಾದ ಎಲ್ಲ ತರಹದ ಪದಾರ್ಥಗಳನ್ನು ಒಂದೆಡೆ ಸೇರಿಸಿ ಕಿಟ್ ರೂಪದಲ್ಲಿ 5 ಸಾವಿರ ಕುಟುಂಬಗಳಿಗೆ ಹಂಚಿಕೆ ಮಾಡಲಾಗಿದೆ. ಹಾಲು, ತುಪ್ಪ, ಗೋಡಂಬಿ, ಬಾದಾಮ್, ಪಿಸ್ತಾ, ದ್ರಾಕ್ಷಿ, ಒಣಕೊಬ್ಬರಿ, ಸಕ್ಕರೆ ಸೇರಿ ಹಲವು ಪದಾರ್ಥಗಳು ಕಿಟ್ನಲ್ಲಿವೆ. ಮುಂಬೈ ನಗರದಲ್ಲಿನ ಕೊಳಗೇರಿ ಪ್ರದೇಶದ ಬಹುತೇಕರಿಗೆ ಈ ಕಿಟ್ ವಿತರಿಸಲಾಗಿದ್ದು, ಭಾಯಿಜಾನ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಶೂಟಿಂಗ್ ಶುರು ಮಾಡಿದ ಅಕ್ಷಯ್ ಕುಮಾರ್ …
ಸಿನಿಮಾ ವಿಚಾರಕ್ಕೆ ಬರುವುದಾದರೆ, ಇಷ್ಟೊತ್ತಿಗಾಗಲೇ ಸಲ್ಮಾನ್ ಖಾನ್ ನಟನೆಯ ರಾಧೆ ಚಿತ್ರ ಈದ್ ಪ್ರಯುಕ್ತ ಬಿಡುಗಡೆ ಆಗಬೇಕಿತ್ತು. ಲಾಕ್ಡೌನ್ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಅಭಿಮಾನಿಗಳಲ್ಲಿನ ಆ ಬೇಸರವನ್ನು ಕಳೆಯುವ ನಿಟ್ಟಿನಲ್ಲಿ, ಈದ್ ಪ್ರಯುಕ್ತ ತಾವೇ ಧ್ವನಿ ನೀಡಿದ ಭಾಯಿ ಭಾಯಿ ಹೆಸರಿನ ಹಾಡನ್ನು ಬಿಡುಗಡೆ ಮಾಡಿದ್ದಾರೆ. (ಏಜೆನ್ಸೀಸ್)