ಶೂಟಿಂಗ್ ಶುರು ಮಾಡಿದ ಅಕ್ಷಯ್ ಕುಮಾರ್ ...

Akshay Kumar Final
Published on

ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಒಂದಿಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್, ಇದೀಗ ಲಾಕ್‌ಡೌನ್ ಸ್ವಲ್ಪ ತೆರವಾಗುತ್ತಿದ್ದಂತೆಯೇ ಅಖಾಡಕ್ಕೆ ಇಳಿದಿದ್ದಾರೆ. ಸೋಮವಾರ ಅವರು ಶೂಟಿಂಗ್‌ಗೆ ಹಾಜರಾಗಿದ್ದಾರೆ.

ಅಕ್ಷಯ್ ಕುಮಾರ್ ಶೂಟಿಂಗ್‌ಗೆ ಬಂದಿದ್ದಾರೆ ಎಂದರೆ, ಹಲವು ಪ್ರಶ್ನೆಗಳು ಉದ್ಭವಿಸುವುದು ದಿಟ. ಯಾವ ಸಿನಿಮಾ? ಯಾರ ನಿರ್ದೇಶನ? ಶೂಟಿಂಗ್ ಎಲ್ಲಿ ನಡೆಯುತ್ತಿದೆ? ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆಯಾ? ಎಂಬ ಹಲವು ಪ್ರಶ್ನೆಗಳು ಬರುತ್ತವೆ.

ವಿಶೇಷವೆಂದರೆ, ಅಕ್ಷಯ್ ಕುಮಾರ್ ಅಭಿನಯಿಸಿದ್ದು ಚಲನಚಿತ್ರವಲ್ಲ. ಆರೋಗ್ಯ ಇಲಾಖೆಯು, ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಒಂದು ಜಾಹೀರಾತು ನಿರ್ಮಿಸುತ್ತಿದ್ದು, ಈ ಜಾಹೀರಾತಿನ ಚಿತ್ರೀಕರಣದಲ್ಲಿ ಅಕ್ಷಯ್ ಕುಮಾರ್ ಪಾಲ್ಗೊಂಡಿದ್ದಾರೆ. ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದಲ್ಲಿ ‘ಪ್ಯಾಡ್ ಮ್ಯಾನ್’ ಚಿತ್ರವನ್ನು ನಿರ್ದೇಶಿಸಿದ್ದ ಆರ್. ಬಾಲ್ಕಿ, ಈ ಜಾಹೀರಾತಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಮುಂಬೈನ ಫಿಲ್ಮಿಸ್ತಾನ್ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಕೆಲವೇ ಮಂದಿ ಭಾಗವಹಿಸಿದ್ದರು ಮತ್ತು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋಗಳೇ ಹೇಳುತ್ತವೆ. ತಂಡದವರೆಲ್ಲಾ ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಕೇವಲ ಎರಡೂವರೆ ಗಂಟೆ ಅವಧಿಯಲ್ಲಿ ಈ ಜಾಹೀರಾತಿನ ಚಿತ್ರೀಕರಣ ಮುಗಿಸಿದ್ದಾರೆ.

ಇನ್ನು ಸಿನಿಮಾ ಚಿತ್ರೀಕರಣದ ವಿಷಯಕ್ಕೆ ಬಂದರೆ, ಸದ್ಯಕ್ಕೆ ಶುರುವಾಗುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ, ಹಿರಿಯ ನಟ ಚಿರಂಜೀವಿ ಅವರ ನೇತೃತ್ವದ ತೆಲುಗು ಚಿತ್ರರಂಗದ ನಿಯೋಗವೊಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಮನವಿ ಮಾಡಿದೆ. ಆದರೆ, ಈ ಕುರಿತು ಸರ್ಕಾರದಿಂದ ಸದ್ಯಕ್ಕೆ ಯಾವುದೇ ಅನುಮತಿ ಸಿಕ್ಕಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net