ಮರದ ಕೆಳಗೇ ಹಾಸಿಗೆ, ಕೊಂಬೆಗಳಲ್ಲೇ ಸಲೈನ್​ ಬಾಟೆಲ್​! ನಗರಕ್ಕೆ ಬರಲು ಹೆದರಿ ಮರದಡಿ ಮಲಗಿದ ರೋಗಿಗಳು!

mp
Published on

ಭೋಪಾಲ್: ದೇಶದಲ್ಲಿ ಕರೊನಾ ರುದ್ರತಾಂಡವ ಆಡುತ್ತಿದೆ. ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ ಭರ್ತಿಯಾಗಿದೆ. ಹೀಗಿರುವಾಗ ನಗರಕ್ಕೆ ಬಂದರೆ ಕರೊನಾ ಬಂದಿದೆ ಎನ್ನುತ್ತಾರೆ ಎಂದ ಭಯಪಟ್ಟ ಗ್ರಾಮದ ರೋಗಿಗಳು ಮರದಡಿಯಲ್ಲೇ ಚಿಕಿತ್ಸೆ ಪಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಈ ರೀತಿಯ ಘಟನೆ ನಡೆದಿದೆ. ಅಲ್ಲಿನ ಹಳ್ಳಿಯೊಂದರಲ್ಲಿ ಅನೇಕರು ತಂಡಿ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಗೆ ತೆರಳಿದರೆ ಕರೊನಾ ಪರೀಕ್ಷೆ ಮಾಡಿಸಲು ಹೇಳುತ್ತಾರೆ ಎನ್ನುವ ಭಯದಿಂದ ಅವರು ಗ್ರಾಮದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಆಸ್ಪತ್ರೆಯ ಬೆಡ್​ಗಳು ಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲೇ ಹತ್ತಿರದಲ್ಲಿರುವ ಮರಗಳ ಕೆಳಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮರದ ಕೆಳಗೆ ಹಾಸಿಗೆ ಹಾಸಿ, ಮರದ ಕೊಂಬೆಗಳಿಗೆ ಸಲೈನ್​ ಬಾಟೆಲ್​ಗಳನ್ನು ಕಟ್ಟಿ ರೋಗಿಗಳಿಗೆ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ರೀತಿಯ ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ತಂಡಿ, ಜ್ವರ, ತಲೆನೋವಿನಂತಹ ರೋಗ ಲಕ್ಷಣವಿರುವವರು ದಯಮಾಡಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net