ಬೆಳಗ್ಗೆ ಅಪ್ಪ, ರಾತ್ರಿ ಮಗ.. ಒಂದೇ ದಿನ ಕುಟುಂಬದ ಇಬ್ಬರನ್ನು ಬಲಿ ಪಡೆದ ಕರೊನಾ!

telangana
Published on

ಹೈದರಾಬಾದ್​: ಕರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಸಾವಿರಾರು ಜನರು ಸೋಂಕಿಗೆ ಬಲಿಯಾಗಲಾರಂಭಿಸಿದ್ದಾರೆ. ಒಂದೇ ಕುಟುಂಬದ ಎರಡು, ಮೂರು ಜನರನ್ನು ಕರೊನಾ ಬಲಿ ಪಡೆಯುತ್ತಿರುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಇದೀಗ ಅದೇ ರೀತಿಯ ಪ್ರಕರಣವೊಂದರಲ್ಲಿ ಅಪ್ಪ ಮಗ ಇಬ್ಬರು ಒಂದೇ ದಿನ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ.

ತೆಲಂಗಾಣದ ವೇಮುಲವಾಡದಲ್ಲಿ ಅಪ್ಪ, ಅಮ್ಮ ಮತ್ತು ಇಬ್ಬರು ಅವಳಿ ಮಕ್ಕಳ ಸುಂದರ ಕುಟುಂಬ. ತಂದೆ ಗುಮ್ಮಡಿ ಪ್ರಕಾಶ್​ (45) ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ತಾಯಿ ಮಧುರಿಯಾ ಮನೆಯಲ್ಲಿಯೇ ಇದ್ದು, ಮನೆಯನ್ನು ನಿಭಾಯಿಸುತ್ತಿದ್ದರು. ಮುದ್ದಿನ ಮಕ್ಕಳಾದ ಅಭಯ್​ ಮತ್ತು ಅಭಿಜಿತ್ ಓದು, ಆಟವೆಂದುಕೊಂಡು ಸಂತೋಷದಿಂದ ಇದ್ದ ಕುಟುಂಬವದು.

ಆ ಕುಟುಂಬದವರದಲ್ಲಿ ಕರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಅವರು ಮೂರು ದಿನಗಳ ಹಿಂದಷ್ಟೇ ಕರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರಲ್ಲಿ ನಾಲ್ವರಿಗೂ ಕರೊನಾ ದೃಢವಾಗಿದ್ದಾಗಿ ವರದಿ ಬಂದಿತ್ತು. ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆದರೆ ದುರಾದೃಷ್ಟವಶಾತ್​ ಮಂಗಳವಾರ ಬೆಳಗ್ಗೆ ಪ್ರಕಾಶ್​ ಕೊನೆಯುಸಿರೆಳೆದಿದ್ದಾರೆ. ಮನೆ ಯಜಮಾನನ ಅಗಲುವಿಕೆಯಿಂದ ನೋವಿನಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಅದೇ ದಿನ ರಾತ್ರಿ ಮಗ ಅಭಿಜಿತ್​ ಕೂಡ ಕರೊನಾಗೆ ಬಲಿಯಾಗಿದ್ದಾನೆ.

ಪ್ರಕಾಶ್ ಮತ್ತು ಅಭಿಜಿತ್​ ಹೊರೆತುಪಡಿಸಿ ಕುಟುಂಬದ ಇನ್ನಿಬ್ಬರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ. ಮನೆಯ ಎರಡು ಸದಸ್ಯರನ್ನು ಕಳೆದುಕೊಂಡಿರುವ ಕುಟುಂಬ ಕಣ್ಣೀರ ಕೋಡಿ ಹರಿಸುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net