ಸಕಲ ನರಸಿಂಹಲು ಜೀವನ ಯುವಕರಿಗೆ ಮಾದರಿ: ಸವಿನೆನಪುಗಳ ಕೃತಿ ಬಿಡುಗಡೆ

skala
Published on

ಬೆಂಗಳೂರು: ಸಕಲ ನರಸಿಂಹುಲು ಚೆಟ್ಟಿಯವರ ಜೀವನ ಯುವಜನಾಂಗಕ್ಕೆ ಸ್ಪೂರ್ತಿಯಾಗಿದ್ದು, ಅವರ ಬದುಕಿನ ಪ್ರತಿ ಅಂಶಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸಿದ್ದು ಸ್ತುತ್ಯಾರ್ಹ ಎಂದು ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪನಿ ಮಾಜಿ ಚೇರ್ಮನ್ ಎ.ಕೃಷ್ಣಮೂರ್ತಿ ಬಣ್ಣಿಸಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಪ್ರತಿಭಾ ಜ್ಯೂಯಲರ್ಸ್ ಕುಟುಂಬ ಆಯೋಜಿಸಿದ್ದ ಸಕಲ ನರಸಿಂಹುಲು ಚೆಟ್ಟಿ ಸವಿನೆನಪು ಕಾರ್ಯಕ್ರಮದಲ್ಲಿ ಅವರ ಕುರಿತು ಹೊರತಂದಿರುವ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಸಕಲ ನರಸಿಂಹುಲು ಚೆಟ್ಟಿ 97 ವರ್ಷಗಳ ತುಂಬು ಜೀವನದಲ್ಲಿ ಕೇವಲ ಉದ್ಯಮಿಯಾಗಿಯೋ, ಸಾಧಕರಾಗಿಯೋ ಪ್ರಸಿದ್ಧರಾದವರಲ್ಲ. ಬದಲಾಗಿ ಧರ್ಮ, ಸೇವೆ, ಪರಿಶುದ್ಧತೆ, ಕರ್ತವ್ಯ, ಜೀವನ ಹೀಗೆ ಪ್ರತಿ ವಿಷಯದಲ್ಲಿ ಮಾದರಿ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದರು. ಭಗವದ್ಗೀತೆಯಲ್ಲಿ ಹೇಳುವ ಹಾಗೆ ಕರ್ಮಯೋಗಿ ಎಂಬ ಶಬ್ದಕ್ಕೆ ನರಸಿಂಹುಲು ಚೆಟ್ಟಿ ವ್ಯಾಖ್ಯಾನದಂತೆ ಬದುಕಿದ್ದಾರೆ. ಅವರ ಕುರಿತು ಹೊರ ಬಂದಿರುವ ಕೃತಿ ಯುವ ಜನಾಂಗಕ್ಕೆ ಒಂದು ರೀತಿಯ ಪರ್ಯಾಯ ಗೀತೆಯಂತಿದೆ ಎಂದು ಕೃಷ್ಣಮೂರ್ತಿ ವಿವರಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ. ರವಿಶಂಕರ್ ಮಾತನಾಡಿ, ಸಕಲ ನರಸಿಂಹುಲು ಸಮಾಜದ ಶ್ರೇಯೋಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ‘ಮಾತಾಡುವ ಮೊದಲು ನಮ್ಮ ಮಾತಿಗೆ ನಾವೇ ಒಡೆಯರು. ಮಾತಾಡಿದ ನಂತರ ನಮ್ಮ ಮಾತಿಗೆ ನಾವೇ ಗುಲಾಮರು’, ಪ್ರಯತ್ನಗಳು ಗರಿಕೆಯಂತಿರಬೇಕು. ಇತ್ಯಾದಿ ಅವರ ಸ್ಪೂರ್ತಿತುಂಬಿದ ಮಾತುಗಳು ದಾಖಲಾರ್ಹ ನುಡಿಗಟ್ಟುಗಳು. ಅವರು ಕೇವಲ ಆಸ್ತಿ ಬಿಟ್ಟು ಹೋಗಿಲ್ಲ. ಸಾಧನೆ, ಆದರ್ಶ, ಸಂಸ್ಕಾರಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಕಲ ಶರತ್ ಚೆಟ್ಟಿ, ಸಕಲ ಮುರುಳಿ ಚೆಟ್ಟಿ ಮತ್ತು ಸಕಲ ಕುಟುಂಬದ ಸದಸ್ಯರು, ಬಂಧುಗಳು ಉಪಸ್ಥಿತರಿದ್ದರು.

"ತನ್ನ ಸ್ವಾರ್ಥವನ್ನು ಬಿಟ್ಟು ಲೋಕ ಕಲ್ಯಾಣಕ್ಕಾಗಿ, ಪರಹಿತಕ್ಕಾಗಿ ಬದುಕಿ ಜೀವನ ಸಾರ್ಥಕಗೋಳಿಸಿಕೊಂಡವರು ಬಹಳ ವಿರಳ. ಅಂತ ವಿರಳರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವವರು ಸಕಲ ನರಸಿಂಹುಲು ಚೆಟ್ಟಿ." -ಪೂಜ್ಯ ಸ್ವಾಮಿ ಬ್ರಹ್ಮಾನಂದಜಿ, ಚಿನ್ಮ ಮಿಷನ್ ಮುಖ್ಯಸ್ಥರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net